
ವಿಜಯಪುರ, 19 ಅಕ್ಟೋಬರ್ (ಹಿ.ಸ.)
ನವರಾತ್ರಿಯ ಎಂಟನೇ ದಿನವಾದ ದುರ್ಗಾಷ್ಟಮಿಯನ್ನು ಅತ್ಯಂತ ಪವಿತ್ರ ಹಾಗೂ ಶಕ್ತಿಯುತ ದಿನವೆಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಶ್ರೀ ವಿಜಯಾಂಬಾ ದೇವಸ್ಥಾನ ಹಾಗೂ ಜೋರಾಪುರಪೇಠದ ಅಂಬಾ ಭವಾನಿ ದೇವಸ್ಥಾನಗಳಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ವಿವಿಧ ಧಾರ್ಮಿಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ನವರಾತ್ರಿ ಮಹೋತ್ಸವದ ಅಂಗವಾಗಿ ದುರ್ಗಾಷ್ಟಮಿಗೆ ವಿಶೇಷ ಮಹತ್ವವಿದ್ದು, ಈ ದಿನ ತಾಯಿ ದುರ್ಗಾದೇವಿಯು ಮಹಾಗೌರಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ದುಷ್ಟಶಕ್ತಿಗಳ ಸಂಹಾರಕ್ಕಾಗಿ ದೇವಿಯು ಉಗ್ರ ಸ್ವರೂಪವನ್ನು ಧರಿಸಿದ ದಿನವೆಂಬ ನಂಬಿಕೆಯ ಹಿನ್ನೆಲೆಯಲ್ಲಿ ದುರ್ಗಾಷ್ಟಮಿಯಂದು ದೇವಿಯ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ.
ನಗರದ ಶ್ರೀ ವಿಜಯಾಂಬಾ ದೇವಸ್ಥಾನ ಹಾಗೂ ಜೋರಾಪುರಪೇಠದ ಅಂಬಾ ಭವಾನಿ ದೇವಸ್ಥಾನಗಳಲ್ಲಿ ಮಧ್ಯರಾತ್ರಿಯಿಂದಲೇ ವಿಶೇಷ ಪೂಜೆ, ಅಲಂಕಾರ, ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ನೂರಾರು ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಶಿವರುದ್ರ ಬಾಗಲಕೋಟೆ, ನವರಾತ್ರಿಯ ದುರ್ಗಾಷ್ಟಮಿ ದಿನದಂದು ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ನಗರದ ಪ್ರಮುಖ ದೇವಾಲಯಗಳಲ್ಲಿ ನಡೆಯುವ ಇಂತಹ ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಭಕ್ತಿಭಾವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಹೇಳಿದರು.
ದುರ್ಗಾಷ್ಟಮಿ ಅಂಗವಾಗಿ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು, ತಮ್ಮ ಕುಟುಂಬದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande