
ವಿಜಯಪುರ, 19 ಅಕ್ಟೋಬರ್ (ಹಿ.ಸ.)
ಬರ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ. ಪಾಟೀಲ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದರು, ‘ಕುಣಿಯಲು ಬಾರದವರು ನೆಲ ಡೊಂಕು’ ಎಂಬಂತಾಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಎಂದು ತಿರುಗೇಟು ನೀಡಿದ್ದಾರೆ.
ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇವಲ ₹2,500 ಪರಿಹಾರ ಘೋಷಿಸಿದ್ದು, ಕೇಂದ್ರದಿಂದ ಹೆಚ್ಚಿನ ಪರಿಹಾರ ತರುವ ನಿಟ್ಟಿನಲ್ಲಿ ಸಂಸದರು ಪ್ರಯತ್ನಿಸಬೇಕು ಎಂಬ ಸಚಿವ ಎಂ.ಬಿ. ಪಾಟೀಲರ ಹೇಳಿಕೆ ಕುರಿತು ಮಾತನಾಡಿದ ಜಿಗಜಿಣಗಿ, ರಾಜ್ಯ ಸರ್ಕಾರ ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ‘ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಕೇವಲ ₹2,500 ಪರಿಹಾರ ಘೋಷಿಸಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಟೀಕಿಸಿದರು.
ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಎಲ್ಲದಕ್ಕೂ ಕೇಂದ್ರ ಸರ್ಕಾರವೇ ಪರಿಹಾರ ನೀಡಬೇಕು ಎನ್ನುವುದಾದರೆ ರಾಜ್ಯದಲ್ಲಿ ಸರ್ಕಾರ ಇರುವುದಾದರೂ ಏತಕ್ಕೆ? ಜನರಿಗೆ ಜನಪರ ಆಡಳಿತ ನೀಡುವಲ್ಲಿ ರಾಜ್ಯ ಸರ್ಕಾರದ ಪಾತ್ರವೇನು? ತಮ್ಮಿಂದ ಸುಗಮ ಹಾಗೂ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲವೆಂದಾದರೆ ಅಧಿಕಾರದಲ್ಲಿ ಮುಂದುವರಿಯುವುದಾದರೂ ಏಕೆ ಎಂದು ಜಿಗಜಿಣಗಿ ಪ್ರಶ್ನಿಸಿದರು.
ಬರದ ತೀವ್ರತೆಗೆ ಅನುಗುಣವಾಗಿ ಪರಿಹಾರ ನೀಡಿ
ರಾಜ್ಯದಲ್ಲಿ ಬರ ಘೋಷಣೆಯಾದರೂ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಬರದ ತೀವ್ರತೆಗೆ ಅನುಗುಣವಾಗಿ ರೈತರಿಗೆ ಪರಿಹಾರ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಒದಗಿಸಬೇಕು ಎಂದು ಆಗ್ರಹಿಸಿದರು.
ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಗಳನ್ನು ಸಕಾಲದಲ್ಲಿ ನಡೆಸಿ, ತಾಲೂಕು ಹಾಗೂ ಜಿಲ್ಲಾಮಟ್ಟದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ ಈ ವಿಚಾರದಲ್ಲಿ ಸರ್ಕಾರ ಅಗತ್ಯ ವೇಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ದೂರಿದರು.
ಬಿಜೆಪಿ ಸರ್ಕಾರದ ಅವಧಿಯನ್ನು ಪ್ರಸ್ತಾಪಿಸಿದ ಜಿಗಜಿಣಗಿ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳ ತುರ್ತು ನಿರ್ವಹಣೆಗಾಗಿ ತಕ್ಷಣವೇ ₹10 ಸಾವಿರ ಪರಿಹಾರ ನೀಡಲಾಗಿತ್ತು. ಮುಳುಗಡೆಯಾದ ಗ್ರಾಮಗಳ ಜನರನ್ನು ಸ್ಥಳಾಂತರಿಸಿ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನೂ ಕೈಗೊಳ್ಳಲಾಗಿತ್ತು ಎಂದು ಜಿಗಜಿಣಗಿ ಹೇಳಿದರು.
ಆದರೆ ಈಗ ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಣೆಯಾಗಿದ್ದರೂ, ರೈತರು ಹಾಗೂ ಗ್ರಾಮೀಣ ಜನರ ಸಂಕಷ್ಟಕ್ಕೆ ಅನುಗುಣವಾಗಿ ಸಮರ್ಪಕ ಪರಿಹಾರ ನೀಡಲಾಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದ್ದರೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹೊಣೆಗಾರಿಕೆಯನ್ನು ಸರ್ಕಾರ ಪ್ರಶ್ನಿಸಿಕೊಳ್ಳಬೇಕು ಎಂದು ಅವರು ಕಿಡಿಕಾರಿದರು.
ಆಲಮಟ್ಟಿ ನೀರು ಹರಿಸುವ ವಿಚಾರದಲ್ಲೂ ಆರೋಪ
ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬರದ ತೀವ್ರತೆ ಹೆಚ್ಚಾಗಿರುವ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ಅನಧಿಕೃತವಾಗಿ ನೀರು ಹರಿಸಲಾಗುತ್ತಿದೆ ಎಂದು ಜಿಗಜಿಣಗಿ ಆರೋಪಿಸಿದರು.
ಬರಪೀಡಿತ ಪ್ರದೇಶಗಳ ಜನರು ಕುಡಿಯುವ ನೀರು ಹಾಗೂ ಕೃಷಿ ನೀರಿಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಜಲ ಸಂಪನ್ಮೂಲಗಳ ಬಳಕೆಯ ಕುರಿತು ಸರ್ಕಾರ ಸ್ಪಷ್ಟ ನಿಲುವು ತಾಳಬೇಕು. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀರಿನ ನಿರ್ವಹಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಬರ ಪರಿಸ್ಥಿತಿಯ ಕುರಿತು ಸಕಾಲದಲ್ಲಿ ಕೆಡಿಪಿ ಸಭೆಗಳನ್ನು ಕರೆದು ಚರ್ಚೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಸಚಿವರು ವಿದೇಶಿ ಪ್ರವಾಸಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸಚಿವರ ವಿರುದ್ಧವೂ ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ
ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶದ ವಿವಿಧ ರಾಜ್ಯಗಳ ರೈತರು ಕಬ್ಬು ಬೆಳೆ ಹಾಗೂ ಅದರ ಬೆಲೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಶೇಷ ಸಮಿತಿ ರಚಿಸಿದೆ ಎಂದು ಜಿಗಜಿಣಗಿ ತಿಳಿಸಿದರು.
ಈ ವಿಚಾರದಲ್ಲಿ ರಾಜ್ಯದ ಸಂಸದರು ಕೇಂದ್ರ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಆದರೆ ರಾಜ್ಯ ಸರ್ಕಾರದ ಪಾತ್ರವೇನು? ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಇಲ್ಲವೇ? ರೈತರ ಸಮಸ್ಯೆಯನ್ನು ಕೇವಲ ಕೇಂದ್ರ ಸರ್ಕಾರದ ಮೇಲೆ ಹಾಕಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗುತ್ತಿದೆ. ರೈತರ ಸಮಸ್ಯೆ ಪರಿಹರಿಸುವುದಕ್ಕಿಂತ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಜನರು ಗಮನಿಸುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ರಾಜ್ಯ ಸರ್ಕಾರ ತಕ್ಷಣವೇ ಬರ ಪರಿಸ್ಥಿತಿಯ ವಾಸ್ತವಿಕತೆಯನ್ನು ಅರಿತು, ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಎಲ್ಲ ಪ್ರಮುಖ ವಿಚಾರಗಳಿಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande