ಆನೇಕಲ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಮಂದಿಗೆ ಗಂಭೀರ ಗಾಯ
ಇಬ್ಬರ ಸ್ಥಿತಿ ಚಿಂತಾಜನಕ; ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
Anekal-Gas-Cylinder-Explosion-Six-Injured-Two-Critical


ಬೆಂಗಳೂರು, 19 ಅಕ್ಟೋಬರ್ (ಹಿ.ಸ.):

ಅಡುಗೆ ಅನಿಲ ಸೋರಿಕೆಯಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಶ್ರೀಸಾಯಿ ಬಡಾವಣೆಯಲ್ಲಿ ನಡೆದಿದೆ.

ಮಂಜುನಾಥ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರು ಬಾಡಿಗೆಗೆ ವಾಸವಾಗಿದ್ದರು. ರಾತ್ರಿ ಅಡುಗೆ ಅನಿಲದ ಸ್ಟೌವ್ ಸ್ವಿಚ್ ಆಫ್ ಮಾಡದೆ, ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿಕೊಂಡು ನಿದ್ರೆಗೆ ಜಾರಿದ್ದರಿಂದ ಮನೆಯೊಳಗೆ ಅನಿಲ ಸೋರಿಕೆಯಾಗಿದೆ ಎನ್ನಲಾಗಿದೆ.

ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ಬೀಡಿ ಸೇದಲು ಬೆಂಕಿಕಡ್ಡಿ ಗೀರಿದ ವೇಳೆ ಸಂಗ್ರಹವಾಗಿದ್ದ ಅನಿಲಕ್ಕೆ ಬೆಂಕಿ ತಗುಲಿ ಭಾರೀ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಮನೆಯ ಸಿಮೆಂಟ್ ಶೀಟ್ಗಳು ಛಿದ್ರಗೊಂಡಿದ್ದು, ಒಳಗಿದ್ದ ಬಟ್ಟೆಗಳಿಗೂ ಬೆಂಕಿ ತಗುಲಿದೆ.

ಘಟನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಸಂಜಯ್ ಮತ್ತು ಬೋರೋ ಹಾಗೂ ಮಧ್ಯಪ್ರದೇಶ ಮೂಲದ ಧೀರು, ವಿಜಯ್, ಕೋಬಿನ್ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳೆಲ್ಲರೂ ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande