
ಬೆಂಗಳೂರು, 05 ಜನವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ನಡೆದಿರುವ ಅನಧಿಕೃತ ಮನೆ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ಜಾಗವು ಕಂದಾಯ ಇಲಾಖೆಯದ್ದಲ್ಲ, ಬಿಬಿಎಂಪಿಯದ್ದೇ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ವಿದೇಶ ಪ್ರವಾಸ ಮುಗಿಸಿ ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಸಚಿವರು, ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಅನಧಿಕೃತವಾಗಿ ಮನೆ ನಿರ್ಮಾಣವಾಗಿರುವುದು ನಿಜ. ಬಿಬಿಎಂಪಿ ಇರಲಿ ಅಥವಾ ಕಂದಾಯ ಇಲಾಖೆ ಇರಲಿ, ಸರ್ಕಾರಿ ಅಥವಾ ಸಂಸ್ಥೆಯ ಜಾಗ ಒತ್ತುವರಿಯಾಗಿದ್ದರೆ ಅದನ್ನು ತೆರವು ಮಾಡುವುದು ಆಡಳಿತದ ನಿರಂತರ ಪ್ರಕ್ರಿಯೆ. ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಸರ್ಕಾರಿ ಅಥವಾ ಬಿಬಿಎಂಪಿ ಜಾಗದಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ” ಎಂದು ಹೇಳಿದರು.
ಒಂದೇ ಪ್ರಕರಣವಲ್ಲ, ಇನ್ನೂ ಹಲವಾರು ತೆರವುಗಳು
“ಇದು ಒಂದೇ ಪ್ರಕರಣ ಅಲ್ಲ. ಬೇರೆ ಬೇರೆ ಕಡೆಗಳಲ್ಲಿ ಸರ್ಕಾರಿ ಜಾಗವನ್ನು ಭದ್ರಪಡಿಸುವ ಉದ್ದೇಶದಿಂದ ತೆರವು ಕಾರ್ಯ ಕೈಗೊಳ್ಳಲಾಗಿದೆ. ತೆರವುಗೊಂಡ ಜಾಗದಲ್ಲಿ ಬಹಳ ಕಾಲದಿಂದ ವಾಸಿಸುತ್ತಿದ್ದ ಬಡವರು ಮತ್ತು ಅರ್ಹರು ಇದ್ದಾರೆ. ಮಾನವೀಯ ದೃಷ್ಟಿಯಿಂದ ಅಂಥವರಿಗೆ ಮನೆ ಒದಗಿಸುವ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಂಡಿದ್ದಾರೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಬಾಂಗ್ಲಾದೇಶಿಗರ ನೆಲೆ ಕುರಿತು ಊಹಾಪೋಹ ಬೇಡ
ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದೇಶದವರು ನೆಲೆಸಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಇದು ಕೇವಲ ಊಹಾಪೋಹ. ಊಹಾಪೋಹಗಳ ಆಧಾರದ ಮೇಲೆ ಹೇಳಿಕೆ ನೀಡಬಾರದು. ರಾಜ್ಯದವರು ಯಾರು? ಹೊರರಾಜ್ಯದವರು ಇದ್ದಾರೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸಲಿ. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಅನಿವಾರ್ಯ” ಎಂದು ಹೇಳಿದರು.
ವಿದೇಶದಿಂದ ಸಚಿವರು ಆಗಮಿಸಿದ ಬಳಿಕ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು ಕೃಷ್ಣ ಬೈರೇಗೌಡ ನಿವಾಸಕ್ಕೆ ಭೇಟಿ ನೀಡಿ, ಮನೆ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa