
ಗದಗ, 04 ಜನವರಿ (ಹಿ.ಸ.) :
ಆ್ಯಂಕರ್ : ಗದಗ–ಬೆಟಗೇರಿ ಸಂಪರ್ಕ ಕೊಂಡಿ ಕಡಿತ, ಸಾರ್ವಜನಿಕರ ದೈನಂದಿನ ಬದುಕಿಗೆ ಅಡ್ಡಿ. ಗದಗ–ಬೆಟಗೇರಿ ಅವಳಿ ನಗರದ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿದ್ದ ರೈಲ್ವೆ ಕೆಳಸೇತುವೆಯ ರಸ್ತೆನ್ನು ಏಕಾಏಕಿ ಬಂದ್ ಮಾಡಿರುವ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳಿಂದ ಜನರು, ರೈತರು ಹಾಗೂ ವಿವಿಧ ರೀತಿಯ ವಾಹನಗಳು ಸಂಚರಿಸುತ್ತಿದ್ದ ಈ ಮಾರ್ಗವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಮುಚ್ಚಿರುವುದರಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ರೈಲ್ವೆ ಮೇಲ್ಭಾಗದಲ್ಲಿ ರೈಲು ಸಂಚರಿಸುತ್ತಿದ್ದರೆ, ಕೆಳಭಾಗದಲ್ಲಿ ವಾಹನಗಳು ಸುಗಮವಾಗಿ ಓಡಾಡುತ್ತಿದ್ದ ಈ ವ್ಯವಸ್ಥೆಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಗದಗ ನಗರದಿಂದ ಬೆಟಗೇರಿಗೆ ತೆರಳಲು ರೈಲ್ವೆ ಕೆಳಸೇತುವೆ ಪ್ರಮುಖ ಹಾಗೂ ಕಡಿಮೆ ದೂರದ ಮಾರ್ಗವಾಗಿತ್ತು. ಆಟೋ, ಕಾರು, ಎತ್ತಿನ ಬಂಡಿ, ಟ್ರ್ಯಾಕ್ಟರ್, ಮಿನಿ ಗೂಡ್ಸ್ ವಾಹನಗಳು ಸೇರಿದಂತೆ ನಾನಾ ರೀತಿಯ ವಾಹನಗಳು ಈ ಮಾರ್ಗವನ್ನು ಅವಲಂಬಿಸಿದ್ದವು. ಬ್ರಿಟಿಷ್ ಕಾಲದಿಂದಲೂ ಇದೇ ರಸ್ತೆಯನ್ನು ಜನರು ಬಳಕೆ ಮಾಡುತ್ತ ಬಂದಿದ್ದು, ಈ ಮಾರ್ಗವೇ ಗದಗ–ಬೆಟಗೇರಿ ಅವಳಿ ನಗರದ ನಾಡಿನಾಡಿನ ಸಂಪರ್ಕ ಕೊಂಡಿಯಾಗಿತ್ತು. ಆದರೆ ಇತ್ತೀಚೆಗೆ ರೈಲ್ವೆ ಇಲಾಖೆ ರೈಲು ಹಳಿ ಕೆಳಗಿನ ರಸ್ತೆಯನ್ನು ಬಂದ್ ಮಾಡಿದ್ದು, ಜನರಿಗೆ ದೊಡ್ಡ ಮಟ್ಟದ ತೊಂದರೆ ಉಂಟಾಗಿದೆ.
ರಸ್ತೆ ಬಂದ್ ಆಗಿರುವುದರಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ರೈತರು ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿಂದೆ ನೇರವಾಗಿ ಸಂಚರಿಸುತ್ತಿದ್ದ ಜನರು ಇದೀಗ ನಾಲ್ಕು ರಿಂದ ಐದು ಕಿಲೋಮೀಟರ್ ದೂರ ಸುತ್ತು ಹಾಕಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಗದಗದ ವಿವೇಕಾನಂದ ನಗರ, ಹಾತಲಗೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಬೆಟಗೇರಿಗೆ ತೆರಳಲು ಹೆಚ್ಚಿನ ದೂರ ಕ್ರಮಿಸಬೇಕಾಗಿದ್ದು, ಸಮಯ ಹಾಗೂ ಹಣ ವ್ಯಯ ಹೆಚ್ಚಾಗಿದೆ.
ಗದಗ–ಬೆಟಗೇರಿ ಮಧ್ಯೆ ಮೂರು ರೈಲ್ವೆ ಕೆಳಸೇತುವೆಗಳಿದ್ದು, ಅವುಗಳಲ್ಲಿ ಒಂದನ್ನು ಬಂದ್ ಮಾಡಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಮಿಕ್ಕ ಎರಡು ಸೇತುವೆಗಳ ಮೇಲೆ ವಾಹನಗಳ ಒತ್ತಡ ಹೆಚ್ಚಾಗಿದ್ದು, ಸಂಚಾರ ದಟ್ಟಣೆ ಹಾಗೂ ಅಪಘಾತದ ಭೀತಿ ಹೆಚ್ಚುವಂತಾಗಿದೆ. ಬೆಟಗೇರಿಯ ಆಸ್ಪತ್ರೆಗೆ ಹೋಗುವ ರೋಗಿಗಳು ಹಾಗೂ ಬೆಟಗೇರಿಯಿಂದ ಗದಗಕ್ಕೆ ಶಾಲೆಗೆ ಬರುವ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ಬಂದ್ ಕುರಿತು ಯಾವುದೇ ಪೂರ್ವ ಮಾಹಿತಿ ನೀಡದೆ ಕ್ರಮ ಕೈಗೊಂಡಿರುವ ರೈಲ್ವೆ ಇಲಾಖೆಯ ನಡೆಗೆ ಸ್ಥಳೀಯರು ಕಿಡಿಕಾರಿದ್ದಾರೆ. “ಬೃಹತ್ ವಾಹನಗಳ ಸಂಚಾರದಿಂದ ಸಮಸ್ಯೆಯಿದ್ದರೆ ಅವುಗಳಿಗೆ ನಿರ್ಬಂಧ ವಿಧಿಸಲಿ. ಆದರೆ ಮಿನಿ ವಾಹನಗಳು, ಆಟೋಗಳು ಹಾಗೂ ಪಾದಚಾರಿಗಳಿಗೆ ಅವಕಾಶ ನೀಡಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ಇದೇ ಮಾರ್ಗವಾಗಿ ಓಡಾಡುತ್ತಿದ್ದ ಜನರಿಗೆ ಏಕಾಏಕಿ ನಿರ್ಬಂಧ ಹೇರಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸ್ಥಳೀಯರು ಈಗಾಗಲೇ ಈ ಭಾಗದ ಸಂಸದ ಬಸವರಾಜ್ ಬೊಮ್ಮಾಯಿ ಹಾಗೂ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಕೂಡಲೇ ರಸ್ತೆ ಮುಕ್ತಗೊಳಿಸಿ, ಮೊದಲಿನಂತೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಮಸ್ಯೆಗೆ ಪರಿಹಾರ ಸಿಗದಿದ್ದರೆ ರೈಲ್ವೆ ಇಲಾಖೆ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಮಾರ್ಗವನ್ನು ಏಕಾಏಕಿ ಬಂದ್ ಮಾಡಿರುವ ರೈಲ್ವೆ ಇಲಾಖೆಯ ಕ್ರಮವನ್ನು ಹಿಂಪಡೆಯಲಾಗುತ್ತದೆಯೇ, ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP