
ಗದಗ, 04 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾದ ಘಟನೆ ಸಂಭವಿಸಿದ್ದು, ಈ ಪ್ರದೇಶದ ಅಪಾಯಕಾರಿ ತಿರುವು ಮತ್ತೊಮ್ಮೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಭಾರೀ ಅನಾಹುತದಿಂದ ಪಾರಾಗಿದ್ದಾನೆ.
ಹರದಗಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರಿಂದ ಮೆಕ್ಕೆಜೋಳ ಖರೀದಿಸಿ, ಸುಮಾರು 100 ಕ್ವಿಂಟಲ್ ಮೆಕ್ಕೆಜೋಳದ ಚೀಲಗಳನ್ನು ಲಾರಿಯಲ್ಲಿ ತುಂಬಿಕೊಂಡು ಲಕ್ಷ್ಮೇಶ್ವರ ಪಟ್ಟಣದತ್ತ ಸಾಗಿಸುತ್ತಿದ್ದ ವೇಳೆ, ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕೆಂಪಿಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದೆ. ತಿರುವು ಪ್ರದೇಶದಲ್ಲಿ ವೇಗ ಕಡಿಮೆ ಮಾಡದೇ ಸಾಗಿದ್ದ ಕಾರಣ ಲಾರಿ ಸಮತೋಲನ ಕಳೆದುಕೊಂಡು ರಸ್ತೆ ಬದಿಗೆ ಪಲ್ಟಿಯಾಗಿದೆ ಎನ್ನಲಾಗಿದೆ.
ಲಾರಿ ಪಲ್ಟಿಯಾದ ಪರಿಣಾಮ ಮೆಕ್ಕೆಜೋಳ ತುಂಬಿದ್ದ ಚೀಲಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಚೀಲಗಳಿಂದ ಹೊರಬಿದ್ದ ಕಾಳುಗಳು ರಸ್ತೆಯುದ್ದಕ್ಕೂ ಹರಡಿವೆ. ಪರಿಣಾಮ ಕೆಲಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಹಾಗೂ ಸ್ಥಳೀಯರು ಅಪಘಾತ ಸ್ಥಳದಲ್ಲಿ ನಿಂತು ಪರದಾಡುವಂತಾಯಿತು. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರವನ್ನು ನಿಯಂತ್ರಿಸಿ, ರಸ್ತೆ ಮೇಲಿದ್ದ ಮೆಕ್ಕೆಜೋಳವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು.
ಘಟನೆಯಲ್ಲಿ ಲಾರಿ ಚಾಲಕನಿಗೆ ಸಣ್ಣ ಮಟ್ಟದ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಚಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಲಾರಿಗೂ ಹಾಗೂ ರೈತರಿಂದ ಖರೀದಿಸಿದ ಮೆಕ್ಕೆಜೋಳಕ್ಕೂ ಸಾಕಷ್ಟು ಹಾನಿಯಾಗಿದೆ. ಅಪಘಾತದಿಂದ ಉಂಟಾದ ನಷ್ಟದ ಪ್ರಮಾಣದ ಬಗ್ಗೆ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ.
ಈ ಕೆಂಪಿಗೆರೆ ಸಮೀಪದ ತಿರುವು ಅಪಾಯಕಾರಿ ಎಂಬ ಆರೋಪಗಳು ಬಹುಕಾಲದಿಂದ ಕೇಳಿಬರುತ್ತಿವೆ. ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ಕಾರು, ಲಾರಿ ಸೇರಿದಂತೆ ಹಲವು ವಾಹನಗಳು ಅಪಘಾತಕ್ಕೆ ಈಡಾಗಿರುವ ಉದಾಹರಣೆಗಳಿವೆ. ತಿರುವು ಪ್ರದೇಶದಲ್ಲಿ ಸೂಕ್ತ ಎಚ್ಚರಿಕಾ ಸೂಚನಾ ಫಲಕಗಳ ಕೊರತೆ, ರಸ್ತೆ ಅಗಲೀಕರಣದ ಅಭಾವ ಹಾಗೂ ವೇಗ ನಿಯಂತ್ರಣ ವ್ಯವಸ್ಥೆಗಳಿಲ್ಲದಿರುವುದೇ ನಿರಂತರ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳೀಯ ಗ್ರಾಮಸ್ಥರು ಹಾಗೂ ವಾಹನ ಸವಾರರು ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಮುಂದೆ ಇನ್ನೂ ಗಂಭೀರ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಜೀವಹಾನಿ ಆಗುವ ಮುನ್ನವೇ ಅಪಾಯಕಾರಿ ತಿರುವನ್ನು ಸರಿಪಡಿಸಬೇಕು” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರಸ್ತೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ತಿರುವಿಗೆ ಸೂಕ್ತ ಸುಧಾರಣೆ, ರಸ್ತೆ ಅಗಲೀಕರಣ, ಎಚ್ಚರಿಕಾ ಫಲಕಗಳ ಅಳವಡಿಕೆ ಹಾಗೂ ವೇಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಕೆಂಪಿಗೆರೆ ತಿರುವು ಮುಂದುವರಿದು “ಅಪಘಾತಗಳ ತಾಣ”ವಾಗಿಯೇ ಉಳಿಯಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP