


ಕೊಪ್ಪಳ, 04 ಜನವರಿ (ಹಿ.ಸ.) :
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅತಿಥಿಗಳು, ಮೇಘಾಲಯದ ಗೌರವಾನ್ವಿತ ರಾಜ್ಯಪಾಲರು
ಶ್ರೀ ಚಂದ್ರಶೇಖರ ಎಚ್. ವಿಜಯಶಂಕರ
--------------------------
ಪೂರ್ಣ ಹೆಸರು ಚಂದ್ರಶೇಖರ್ ಎಚ್. ವಿಜಯಶಂಕರ್ ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದವರು. (ಜನನ 21 ಅಕ್ಟೋಬರ್ 1956ರಂದು ಜನಿಸಿದರು. 27 ಜೂನ್ 2024ರಿಂದದ ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದಾರೆ. ಕರ್ನಾಟಕದ ಗ್ರಾಮೀಣ ಹಿನ್ನಲೆಯಲ್ಲಿ ಆರಂಭವಾದ ರಾಜಕೀಯ ಪಯಣವು, ಇಂದು ಮೇಘಾಲಯ ರಾಜ್ಯಪಾಲರ ಹುದ್ದೆಯವರೆಗೆ ತಲುಪಿರುವುದು ಅವರ ಜವಾಬ್ದಾರಿಯುತ ಮನೋಭಾವದ ಪ್ರತೀಕವಾಗಿದೆ. ಶ್ರೀ ಚಂದ್ರಶೇಖರ ಎಚ್. ವಿಜಯಶಂಕರ ಅವರು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆ ಅನುಪಮ. ಪ್ರಜಾಸತ್ತಾತ್ಮಕ ಮೌಲ್ಯಗಳು, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದ ಅವರ ವಿಚಾರಧಾರೆ ಸ್ಪೂತಿದಾಯಕವಾಗಿವೆ. ಸರಳ ಸಜ್ಜನಿಕೆಯ ಒಬ್ಬ ಸಾಮಾನ್ಯ ವ್ಯಕ್ತಿಯು ಅಸಾಮಾನ್ಯವಾಗಿ ಬೆಳೆಯಬಹುದು ಎನ್ನುವುದಕ್ಕೆ ಶ್ರೀ ಎಚ್ ವಿಜಯಶಂಕರ ಅವರ ಬದುಕು ಮಾದರಿಯಾಗಿದೆ. ನಾಡಿನ ಹೆಮ್ಮೆಯಾಗಿರುವ ಅವರು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸುತ್ತಿರುವುದು ಜಾತ್ರೆಯ ವಿಶೇಷತೆಗಳಲ್ಲಿ ಒಂದಾಗಿದೆ.
--------------------------
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2026
05-01-2026 ರಂದು ಕೈಲಾಸ ಮಂಟಪದ ವೇದಿಕೆಯಲ್ಲಿನ ಪರಮ ಪೂಜ್ಯರ ಪರಿಚಯ
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು
ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು
ಶ್ರೀ ಜಗದ್ಗುರು ಮೂರು ಸಾವಿರಮಠ ಮಹಾಸಂಸ್ಥಾನ, ಹುಬ್ಬಳ್ಳಿ.
ಕರ್ನಾಟಕದ 12ನೇ ಶತಮಾನದ ಶರಣರ ಆಶಯದಂತೆ ಸ್ಥಾಪಿತಗೊಂಡ ಉತ್ತರ ಕರ್ನಾಟಕದ ಹೆಮ್ಮೆಯ ಒಂದು ಆಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಹುಬ್ಬಳ್ಳಿಯ ಮೂರುಸಾವಿರ ಮಠವು ಪ್ರಾಚೀನ ಇತಿಹಾಸ ಹೊಂದಿದ್ದು, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದಲ್ಲಿ ಮಹತ್ವದ ಕೊಡುಗೆ ನೀಡಿದೆ. ಶ್ರೀ ಮೂರುಸಾವಿರಮಠದ ಲಿಂಗೈಕ್ಯ ಜಗದ್ಗುರುಗಳಾದ ಪರಮಪೂಜ್ಯ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಜಗದ್ಗುರು ಪೀಠವನ್ನು ಅಲಂಕರಿಸಿದ ಮಹಾಮಹಿಮರು. ಸಮಾಜ ಸೇವೆಯೇ ಸದಾಶಿವನೊಲುಮೆಯಯ್ಯಾ ಎಂದು ಘೋಷಿಸಿಕೊಂಡ ಅವರು ಶ್ರೀ ಮಠದ ಸಂಸ್ಥಾಪಕರಾಗಿದ್ದಾರೆ.
ಕೆ.ಎಲ್.ಇ ಸಂಸ್ಥೆಯ ಸಂಚಾಲಕರನ್ನು ಪ್ರೇರೇಪಿಸಿ ಶ್ರೀ ಕಾಡಸಿದ್ಧೇಶ್ವರ ಕಾಮರ್ಸ್ ಕಾಲೇಜನ್ನು ಸ್ಥಾಪಿಸುವುದರೊಂದಿಗೆ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ ನಗರವನ್ನು ಶಿಕ್ಷಣ ಕೇಂದ್ರವಾಗಿ ನಿರ್ಮಿಸುವಲ್ಲಿ ಪೂಜ್ಯರ ಪಾತ್ರ ಅವಿಸ್ಮರಣೀಯ. ಹುಬ್ಬಳ್ಳಿಯ ಮೂರುಸಾವಿರಮಠದ ಇತಿಹಾಸದಲ್ಲಿ ನವಯುಗ ಆರಂಭಿಸಿದ ಪರಮಪೂಜ್ಯರು ಲಿಂಗೈಕ್ಯ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಅನೇಕ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿ, ಸ್ತ್ರೀ ಪುರುಷರ ಸಮಾನತೆ, ಸ್ತ್ರೀ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬ ಶರಣರ ವಿಚಾರಗಳನ್ನು ಆಚಾರಗೊಳಿಸಿದವರು. ಅವರಂತೆಯೇ ಅವರ ಮಾರ್ಗದಲ್ಲಿಯೇ ಸಾಗುತ್ತಿರುವ ಶಿಕ್ಷಣ ಪ್ರೇಮಿಗಳಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಪ್ರಸ್ತುತ ಪೀಠಾಧಿಪತಿಗಳಾಗಿದ್ದಾರೆ.
ಪ್ರಸ್ತುತ ಪರಮಪೂಜ್ಯರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಸಂಘಟಿಸುವುದಲ್ಲದೆ ಸಮಾಜದಲ್ಲಿ ಸಹಬಾಳ್ವೆ, ಸಮರಸದ ಜೀವನದ ಬಗ್ಗೆ ಸಂದೇಶಗಳನ್ನು ನೀಡುತ್ತಾ, ಧರ್ಮ ಮತ್ತು ಆಧ್ಯಾತ್ಮಿಕತೆಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಪ್ರಮುಖ ಶ್ರೀಗಳಾಗಿದ್ದಾರೆ. ಸಾಮಾಜಿಕ ನೋವುಗಳಿಗೆ, ರೈತರ ಸಮಸ್ಯೆಗಳಿಗೆ, ಉತ್ತರ ಕರ್ನಾಟಕದ ಬೇಡಿಕೆಗಳಿಗೆ ಶ್ರೀಮಠಗಳಿಗೆ ಸೂಕ್ತ ಮಾರ್ಗದರ್ಶನ ಸಹಕಾರ ನೆರವು ನೀಡುತ್ತಲಿದೆ.
--------------------------
ಪರಮ ಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿಗಳು
ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ, ಶ್ರೀ ಕ್ಷೇತ್ರ, ಕಾಗಿನೆಲೆ.
ಕಾಗಿನೆಲೆಯು ಪೂಜ್ಯ ಸಂತ, ಕವಿ ಮತ್ತು ಸಾಮಾಜಿಕ ಸುಧಾರಕ ದಾಸಶ್ರೇಷ್ಠ ಕನಕ ದಾಸ ಅವರ ಜನ್ಮಸ್ಥಳದಲ್ಲಿರುವ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಆಧ್ಯಾತ್ಮಿಕ ಪೀಠಾಧ್ಯಕ್ಷರಾದ ಪ್ರಸ್ತುತ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿಯವರು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕನಕ ಗುರುಪೀಠ ಟ್ರಸ್ಟ್‍ನವತಿಯಿಂದ ಪರಮ ಪೂಜ್ಯರು ವೈವಿಧ್ಯಮಯ ಶಿಕ್ಷಣ ಸಂಸ್ಥೆ ವಸತಿನಿಲಯಗಳನ್ನು ನಡೆಸುವ ಮೂಲಕ, ಬಡ ಮಕ್ಕಳ ಶೈಕ್ಷಣಿಕ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಮೂಲತಃ, ಕಾಗಿನೆಲೆ ಪರಮಪೂಜ್ಯರು ಕನ್ನಡಿಗರ ಹೆಮ್ಮೆಯ ದಾಸಶ್ರೇಷ್ಠ ಕನಕದಾಸರ ಆಶಯಗಳು ಸಾರ್ವಕಾಲಿಕ ಸತ್ಯಗಳಾಗಿವೆ ಆದರ್ಶಗಳಾಗಿವೆ. ಇಂತಹ ಆದರ್ಶಗಳನ್ನು ಪ್ರಸ್ತುತ ದಿನಮಾನಗಳಲ್ಲಿ ಅನುಷ್ಟಾನಗೊಳಿಸುವತ್ತ ಪರಮಪೂಜ್ಯರ ಪ್ರಯತ್ನ ಅನುಪಮ.
--------------------------
ಪರಮ ಪೂಜ್ಯ ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು, ಶ್ರೀ ಗುರುದೇವಾಶ್ರಮ, ಕಾಖಂಡಿಕಿ.
ವಿಜಯಪುರ ಜಿಲ್ಲೆಯ ಶ್ರೀ ಗುರುದೇವಾಶ್ರಮ, ಕಾಖಂಡಿಕಿಯ ಪೀಠಾಧ್ಯಕ್ಷರಾದ ಪರಮಪೂಜ್ಯರು ಪರಮ ಪೂಜ್ಯರಾದ ಲಿಂ. ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ಆಶೀರ್ವಾದ, ಮಾರ್ಗದರ್ಶನ, ಪ್ರಭಾವಳಿಗಳಲ್ಲಿ ಬೆಳೆದು ನಮ್ಮ ನಾಡಿನ ಶರಣರ ಸಂತರ ಆಧ್ಯಾತ್ಮಿಕ ವಿಚಾರ ಧಾರೆಗಳನ್ನು, ಜೀವನದ ಸಂದೇಶಗಳನ್ನು ನಿರಂತರವಾಗಿ ಪ್ರಚುರಪಡಿಸುತ್ತಿದ್ದಾರೆ. ತಮ್ಮ ವಿದ್ವತ್‍ಪೂರ್ಣ ಪ್ರವಚನಗಳಲ್ಲಿ ಜೀವನದ ಸತ್ಯಗಳನ್ನು ಜನಸಾಮಾನ್ಯರಿಗೆ ಮನದಟ್ಟಾಗುವಂತೆ ಸರಳವಾಗಿ ವಿವರಿಸುವ ಪೂಜ್ಯರ ಸೇವೆ ಅನನ್ಯ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – 2026
05-01-2026 ರಂದು ಕೈಲಾಸ ಮಂಟಪದ ವೇದಿಕೆಯಲ್ಲಿನ ಕಲಾವಿದರ ಪರಿಚಯ
--------------------------
ವಿದ್ವಾನ್ ನೌಶಾದ್ ಹರ್ಲಾಪುರ ಮತ್ತು ವಿದ್ವಾನ್ ನಿಶಾದ್ ಹರ್ಲಾಪುರ
ವಿದ್ವಾನ್ ನೌಶಾದ್ ಹರ್ಲಾಪುರ ಮತ್ತು ವಿದ್ವಾನ್ ನಿಶಾದ್ ಹರ್ಲಾಪುರ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಯುವ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾಗಿದ್ದಾರೆ. ತಮ್ಮ ಸಹೋದರರಾದ ವಿದ್ವಾನ್ ನಿಶಾದ್ ಹರ್ಲಾಪುರ ಅವರೊಂದಿಗೆ ಜುಗಲ್ಬಂದಿ (ಯುಗಲ ಗಾಯನ) ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುವ ಮೂಲಕ, ಸಂಗೀತ ವೇದಿಕೆಗಳಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲ ತತ್ವಗಳನ್ನು ಆಳವಾಗಿ ಅರಿತುಕೊಂಡಿರುವ ವಿದ್ವಾನ್ ನೌಶಾದ್ ಹರ್ಲಾಪುರ ಅವರು, ರಾಗದ ಸ್ವಭಾವ, ಆಲಾಪನೆ, ತನಗಳು, ಲಯ ಕಾರ್ಯ ಮತ್ತು ಭಾವ ಪ್ರಕಾಶ ಇತ್ಯಾದಿ ಎಲ್ಲ ಅಂಶಗಳಲ್ಲೂ ಕ್ರಮಬದ್ಧವಾದ ಸಾಧನೆಯನ್ನು ನಡೆಸಿದ್ದಾರೆ. ಶಾಸ್ತ್ರೀಯ ಸಂಗೀತದ ಜೊತೆಗೆ ಸೂಫಿ ಸಂಗೀತ, ಭಕ್ತಿ ಸಂಗೀತ ಹಾಗೂ ಪರಂಪರಾತ್ಮಕ ರಚನೆಗಳಲ್ಲಿಯೂ ಅವರಿಗೆ ವಿಶೇಷ ಆಸಕ್ತಿ ಇದ್ದು, ಈ ವೈವಿಧ್ಯತೆಯೇ ಅವರ ಸಂಗೀತಕ್ಕೆ ಮತ್ತಷ್ಟು ಆಳವನ್ನು ನೀಡುತ್ತದೆ.
-------------------
ಗಂಗಾವತಿ ನರಸಿಂಹ ಜೋಷಿ
ಕನ್ನಡ ಹಾಸ್ಯದ ಲೋಕದಲ್ಲಿ ಹೆಸರು ಕೇಳಿದ ಕೂಡಲೇ ಮುಖದಲ್ಲಿ ನಗು ಮೂಡಿಸುವ ಅಪರೂಪದ ವ್ಯಕ್ತಿತ್ವವೆಂದರೆ ನರಸಿಂಹ ಜೋಷಿ.
ಮೂಲತಃ ಸಿಂಧನೂರಿನ ಬಪ್ಪೂರು ಗ್ರಾಮದವರು. ಹಾಸ್ಯ ಭಾಷಣಗಳ ಜೊತೆಗೆ ಧ್ವನಿಯಲ್ಲಿ ವಿವಿಧ ನಾಯಕರ ಮಿಮಿಕ್ರಿ ಮೂಲಕವೂ ಜನಮನವನ್ನು ರಂಜಿಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ. ಪ್ರಾಣೇಶ್‍ರವರ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿ ರಾಜ್ಯದಾದ್ಯಂತ ಜನಪ್ರಿಯರಾಗಿದ್ದಾರೆ.
ಕೇವಲ ಹಾಸ್ಯ ಭಾಷಣಗಳಿಗೆ ಮಾತ್ರ ಸೀಮಿತಗೊಳ್ಳದೆ, ಚಿತ್ರರಂಗದಲ್ಲೂ ಅಭಿನಯಿಸಿ ಈಗಾಗಲೇ 15ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಹಾಸ್ಯ ಜುಗಲಬಂದಿ ಎಂದರೆ ಕನ್ನಡ ಪ್ರೇಕ್ಷಕರಿಗೆ ತಕ್ಷಣ ನೆನಪಾಗುವುದು ನರಸಿಂಹ ಜೋಷಿ.
“ಜೋಶಿ ಕಾಮಿಡಿ ಜೋಶ್”, “ನಗುವುದೇ ಸ್ವರ್ಗ”, “ನಕ್ಕರೆ ಅದೇ ಸ್ವರ್ಗ”, “ಪಕ್ಕಾ ಕಾಮಿಡಿ”, “ಕಾಮಿಡಿ ಎಕ್ಸ್ಪ್ರೆಸ್” ಸೇರಿದಂತೆ ಅನೇಕ ಜನಪ್ರಿಯ ಟಿವಿ ಶೋಗಳ ಮೂಲಕ ಅವರು ಮನೆಮನೆಗೆ ಪರಿಚಿತರಾಗಿದ್ದಾರೆ. ಅನೇಕ ಸಾಂಸ್ಕøತಿಕ ವೇದಿಕೆಗಳಲ್ಲಿ ಭಾಗವಹಿಸಿ ತಮ್ಮ ಹಾಸ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್