ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ : ಶಾಸಕ ವಿಠ್ಠಲ ಕಟಕದೋಂಡ
ಶಾಸಕ
ಕೃಷಿ


ವಿಜಯಪುರ, 04 ಜನವರಿ (ಹಿ.ಸ.) :

ಆ್ಯಂಕರ್ : ಕೃಷಿಯಲ್ಲಿ ನವೋದ್ಯಮ ಎಂಬ ಘೋಷವಾಕ್ಯದೊಂದಿಗೆ ರೈತರನ್ನು ಪ್ರೋತ್ಸಾಹಿಸಲು ಈ ಭಾಗದ ಹೆಚ್ಚಿನ ರೈತ ಫಲಾನುಭವಿಗಳು ತಮ್ಮ ಚಿಂತನೆಗಳ ಆವಿಷ್ಕಾರ ರೂಪವಾಗಿ ಪರಿವರ್ತಿನೆ ಕಂಡುಕೊಳ್ಳಲು ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ಈ ಕೃಷಿ ಮೇಳದಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.ರೈತರು ಈ ಕೃಷಿ ಮೇಳದ ಸದುಪಯೋಗ ಪಡೆದುಕೊಂಡು ತಮ್ಮ ಕೃಷಿಯೊಂದಿಗೆ ಸಾವಯವ ಪದ್ಧತಿ ಅಳವಡಿಸಿಕೊಳ್ಳುವಂತೆ ನಾಗಠಾಣ ಶಾಸಕರಾದ ವಿಠ್ಠಲ ಕಟಕದೋಂಡ ಹೇಳದರು.

ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್, ಆತ್ಮಯೋಜನೆ ಇವರ ಸಹಯೋಗದಲ್ಲಿ ನಗರದ ಹಿಟ್ನಳ್ಳಿ ಫಾರ್ಮದ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ದ

ಜ.4ರಿಂದ 6 ರವರೆಗೆ 3 ದಿನಗಳ ಕಾಲ ನಡೆಯುವ ಕೃಷಿ ಮೇಳ-2025-26ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು, ವಿವಿಧ ಬೆಳೆಗಳು ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಪ್ರಾಯೋಗಿಕ ತಾಕುಗಳ ವೀಕ್ಷಣೆ, ವಿಚಾರ ಗೋಷ್ಠಿ, ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿ, ಕೃಷಿ ಉದ್ದಿಮೆ ಅಭಿವೃದ್ಧಿ ಮತ್ತು ಮಾರುಕಟ್ಟೆ ಹಾಗೂ ಸುಸ್ಥಿರ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಎಂಬ ವಿಷಯಗಳ ಮೇಲೆ ಈ ಕೃಷಿ ಮೇಳದಲ್ಲಿ ಚರ್ಚಾ ಗೋಷ್ಠಿ, ರೈತರೊಂದಿಗೆ ವಿಚಾರ ವಿನಿಮಯ ನಿರಂತರವಾಗಿ ನಡೆಯಲಿವೆ.

ಜತೆಗೆ ಒಣ ಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿ ಅಭಿವೃದ್ಧಿ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಕಡಲೆ ಮತ್ತು ತೊಗರಿ ತಳಿಗಳು,ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಕೃಷಿ ಸ್ಪಾರ್ಟಆಪ್, ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಕೃಷಿ ಹವಾಮಾನ ಮಾಹಿತಿ, ಕೃಷಿ ಯಾಂತ್ರಿಕತೆ, ಬೀಜೋತ್ಪಾದನೆ, ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ- ಗೃಹ ವಿಜ್ಞಾನ ಮಾಹಿತಿ, ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ,ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಕುರಿತು ಒಂದೇ ಸೂರಿನಡಿಯಲ್ಲಿ ಸಮಗ್ರ ಮಾಹಿತಿ ಲಭ್ಯವಿದ್ದು,ರೈತರು ಸಮಗ್ರ ಮಾಹಿತಿ ಪಡೆದುಕೊಂಡು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು, ಕೃಷಿ ಇಲಾಖೆಯಿಂದ ಪ್ರಕಟಗೊಂಡ ಕೃಷಿ ಪ್ರಕಟಣೆಗಳ ಬಿಡುಗಡೆಗೊಳಿಸಿ ಮಾತನಾಡಿ, 3 ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ರೈತರಿಗಾಗಿ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸ್ಥಾಪಿಸಲಾಗಿದ್ದು, ರೈತರು ಈ ಕೃಷಿ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಪಿ.ಎಲ್ ಪಾಟೀಲ್ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ 3 ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ದ್ರಾಕ್ಷಿಯಲ್ಲಿ ರೋಬೋಟ್ ಚಾಲಿತ ಸಿಂಪರಣೆ, ಸೌರ ವಿದ್ಯುತ್ ಚಾಲಿತ ಕುಡಿ ಚೂಟುವ, ಸಿಂಪರಣೆ ಹಾಗೂ ಕಳೆ ತೆಗೆಯುವ ಯಂತ್ರಗಳ ತಯಾರಿಕೆ, ಬೆಂಚ್ ಗ್ರಾಪ್ಟಿಂಗ್ ತಂತ್ರಜ್ಞಾನ ಅಳವಡಿಕೆ ಮಾಹಿತಿ ನೀಡಲಾಗುತ್ತಿದೆ. ಕೃಷಿ ಮೇಳದಲ್ಲಿ ಒಟ್ಟು 200 ವಿವಿಧ ಮಳಿಗೆಗೆಳನ್ನು ಸ್ಥಾಪಿಸಲಾಗಿದ್ದು, ಯಂತ್ರೋಪಕರಣ ರೈತರ ಕಬ್ಬಿನ ವಿವಿಧ ಉತ್ಪನ್ನಗಳ ಕುರಿತ ಕಬ್ಬಿನ ಅಂಕಣ, ಸಿರಿಧಾನ್ಯ ಮಳಿಗೆ ಹಾಗೂ ಕೃಷಿ ಕೌಶಲ್ಯ ಆಧಾರಿತ ಮಳಿಗೆಗಳನ್ನು ಸ್ಥಾಪಿಸಲಾಗಿದೆ ರೈತರು ಈ ಮೇಳದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಎಸ್. ಪಾಟೀಲ ಮಾತನಾಡಿ, ರೈತರು ಇಂದು ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಗ್ರ ಬದಲಾವಣೆಯತ್ತ ಸಾಗಿ ಕೃಷಿಯಲ್ಲಿ ಹೊಸತನ ತರುವ ಚಿಂತನೆ ಹೊಂದಬೇಕು ಹಾಗೂ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಪ್ರಗತಿಯತ್ತ ಸಾಗಬೇಕು ಎಂದು ಅವರು ಹೇಳಿದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಶಿವಾನಗೌಡ ಎಸ್. ಬಿರಾದಾರ ಮಾತನಾಡಿ,ಕೃಷಿ ಮೇಳವು ರೈತರ ಹಬ್ಬವಾಗಿದೆ.ಇಂದಿನ ಆಹಾರ ಪದ್ಧತಿ ಹೇಗಿರಬೇಕು, ಯಾವ ಋತುವಿನಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬ ಕುರಿತು ಕೃಷಿ ಮಹಾವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನಿಗಳು ರೈತರಿಗೆ ನಿರಂತರವಾಗಿ ಮಾರ್ಗದರ್ಶನ, ಅನೇಕ ಸಂಶೋಧನೆಗಳ, ತರಬೇತಿಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಿಂದಿನ ಕಾಲದ ಬಿತ್ತನೆ ವಿಧಾನಗಳು ಮತ್ತು ಇಂದಿನ ಆಧುನಿಕ ಬಿತ್ತನೆ ಕ್ರಮಗಳಲ್ಲಿ ಅಪಾರ ಬದಲಾವಣೆಗಳಿವೆ. ಹೊಸ ತಂತ್ರಜ್ಞಾನ, ಸುಧಾರಿತ ಬೀಜ, ನೀರಾವರಿ ವ್ಯವಸ್ಥೆ ಹಾಗೂ ಸಮಗ್ರ ಕೃಷಿ ಪದ್ಧತಿಗಳಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯವಾಗಿದೆ.ರೈತರು ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ಕಾಪಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸಿ,ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಅವರು ರೈತರಲ್ಲಿ ಮನವಿ ಮಾಡಿದರು.

*ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ* ರೈತ ಪಂಡಿತ ಗೌರವ ಪಡೆದ ಬತಗುಣಕಿ ರೈತರಾದ ಮುದ್ದುಗೌಡ ಪಾಟೀಲ್ ಮಾತನಾಡಿ, ಇಂದಿನ ರೈತರು ರಾಸಾಯನಿಕ ಕೃಷಿಯಿಂದ ದೂರ ಸರಿದು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ನೈಸರ್ಗಿಕ ಹಾಗೂ ಸಾವಯವ ಕೃಷಿಯಿಂದ ಪರಿಸರ ಹಾನಿ ಕಡಿಮೆಯಾಗುತ್ತದೆ, ಮಣ್ಣಿನ ಫಲವತ್ತತೆ ಕಾಪಾಡಬಹುದು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಆಹಾರ ವ್ಯವಸ್ಥೆ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹೆಗಡಿಹಾಳ ಗ್ರಾಮದ ರೈತರಾದ ಕಾಶಿರಾಯ ಬಿರಾದಾರ, ಅಥರ್ಗಾದ ಬಶೀರಅಹಮ್ಮದ ಬಳಿಗಾರ, ರೈತ ಮಹಿಳೆ ಅನಿತಾ ಪಾಟೀಲ ಮಾತನಾಡಿದರು.

ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕರಾದ ಡಾ. ಮಂಜುನಾಥ ಎಮ್.ವಿ, ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಕೃಷ್ಣರಾಜ ಪಿ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಪಾರ್ವತಿ ಕುರ್ಲೆ, ಸುರೇಶ ಘೋಣಸಗಿ, ಶಿವಾನಂದ ಮಂಗಾನವರ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸಗೌಡರ, ಕೃಷಿ ಮಹಾವಿದ್ಯಾಲಯ ಹಾಗೂ ವಿದ್ಯಾಧಿಕಾರಿಗಳಾದ ಡಾ. ಎಸ್.ಬಿ. ಜಗ್ಗೀನವರ, ಸಹ ವಿಸ್ತರಣಾ ನಿರ್ದೇಶಕರಾದ ಎಮ್.ಎಮ್ ಜಮಾದಾರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎಮ್ ವಸ್ತ್ರದ ಪ್ರಗತಿಪರ ರೈತರು ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande