
ವಿಜಯಪುರ, 04 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾ ಬಿಜೆಪಿ ಪಕ್ಷದಲ್ಲಿ ಮೂರ್ನಾಲ್ಕು ಜನರ ಸರ್ವಾಧಿಕಾರಿ ಧೋರಣೆಯ ತಿರ್ಮಾನದಿಂದ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಭಾನುವಾರ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಬಹುತೇಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಸಭೆ ಬಹಿಷ್ಕಾರ ಹಾಕಿರುವುದಾಗಿ ತಿಳಿದು ಬಂದಿದ್ದು, ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹಿರವಾದಂತಾಗಿದೆ ಎಂದು ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದ ಸಂಘಟನೆ ಏನಾದರಾಗಲಿ, ಕೇವಲ ಹಣ ಇದ್ದವರನ್ನು ಗುರ್ತಿಸಿ, ಅವರಿಂದ ಹಣ ಪಡೆದು, ಅವರಿಗೇ ಪದಾಧಿಕಾರಿಯನ್ನಾಗಿಸುತ್ತಿರುವುದಕ್ಕೆ ಭಾರೀ ವಿರೋಧದ ವ್ಯಕ್ತವಾಗಿದೆ ಎಂದು ಕೇಳಿ ಬಂದಿದ್ದು, ಪಕ್ಷಕ್ಕೆ ಕೆಲವೇ ವರ್ಷಗಳವರೆಗೆ/ತಿಂಗಳವರೆಗೆ ದುಡಿದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿರುವುದು, ಪಕ್ಷದ ಅನೇಕ ಹೋರಾಟಗಳಲ್ಲಿ ಕಾಣಿಸದ, ದುಡಿಯದ ಬುಯ್ಯಾರ, ಬಿದನೂರ, ವಂದಾಲ, ಅಣ್ಣೀಗೇರಿಯಂತಹವರಿಗೆ ಉನ್ನತ ಸ್ಥಾನ ನೀಡಿರುವುದು ಮತ್ತು ನೀಡಲು ನಿರ್ಧರಿಸಿ, ಯತ್ನಾಳರಿಗೆ ಸೆಡ್ಡು ಹೊಡೆಯುವ ಕುತಂತ್ರತನದಿಂದಾಗಿ ರಾಜ್ಯದ ಅಧ್ಯಕ್ಷ ವಿಜಯೇಂದ್ರರ ಕೃಪೆ ಸಿಗಬಹುದು ಎಂಬ ಪ್ಲ್ಯಾನ್ ಈಗ ತಿರುಗುಬಾಣವಾಗಿ ಪರಿಣಮಿಸಿದ್ದು, ಜಿಲ್ಲಾ ಬಿಜೆಪಿಯ ಸ್ಥಿತಿ ಅಯೋಮಯವಾಗುತ್ತಿದೆ ಎಂಬುದಕ್ಕೆ ಇಂದಿನ ಜಿಲ್ಲಾ ಕೋರ್ ಕಮಿಟಿಯಲ್ಲಿ ಬಹುತೇಕರು ಗೈರಾಗಿ, ಬಹಿಸ್ಕರಿಸಿದ್ದಾರೆ ಎಂಬುದೇ ಸಾಕ್ಷಿ.
ನಡಹಳ್ಳಿಯವರ ಮಗನನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕಾತಿಗೂ ಬಹುತೇಕ ಮುಖಂಡರು ತೀವ್ರ ವಿರೋಧ ಮಾಡಿದಲ್ಲದೆ, ಎಲ್ಲವೂ ನೀವೆ ಆದರೆ ಹೇಗೆ ಎಂದು ಖಡಕ್ ಆಗಿ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಸಂಘಟನೆಗಾಗಿ ಏನನ್ನೂ ಮಾಡದೆ ಪಕ್ಷದ ಕಚೇರಿಯಿಂದ ಮನಸ್ಸಿಗೆ ಬಂದಂತೆ ಲೆಕ್ಕ ತೋರಿಸಿ ಖರ್ಚು ಹಾಕುತ್ತಿರುವುದಕ್ಕೂ ಹಲವರು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಧ್ಯಕ್ಷರ ನಡೆಯನ್ನು ಖಂಡಿಸಿದ್ದಾರೆ. ಇತ್ತಿಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನೆಯಿಂದಲೇ ಉಪಹಾರ (ಉಪ್ಪಿಟ್ಟು) ತಂದು ಪಕ್ಷದ ಕಚೇರಿಯಲ್ಲಿ ಖರ್ಚು ಹಾಕಿರುವುದೇ ನೈಜ ಸಾಕ್ಷಿ. ಶಿಸ್ತಿನ ಪಕ್ಷದಲ್ಲಿ ಈ ರೀತಿ ನಡೆಯುತ್ತಿರುವುದು ನೋಡಿದರೆ ಪಕ್ಷದ ಸಂಘಟನೆಯನ್ನು ಅದೋಗತಿಗೆ ಕೊಂಡೊಯ್ಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಯಾವುದೇ ಮಾಹಿತಿಯೂ ನೀಡದೆ ಪ್ರಾಮಾಣಿಕ ಪದಾಧಿಕಾರಿಗಳನ್ನು ಏಕಾಏಕಿ ಕೈಬಿಟ್ಟು ಬೇರೆಯವರನ್ನು ನೇಮಕ ಮಾಡುತ್ತಿರುವುದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಿಂದ ಸ್ಪರ್ಧಿಸಲು ಯಾದಗಿರಿ ಹಾಗೂ ಸಿಂದಗಿ ಮುಖಂಡರುಗಳಿಗೆ ಹಿಂಭಾಗಿಲಿನಿಂದ ಆಹ್ವಾನ ನೀಡಿ ಹಣ ಖರ್ಚು ಮಾಡಿಸುತ್ತಿರುವುದು ಹಾಗೂ ಅದೇ ರೀತಿ ಸಿಂದಗಿ ಕ್ಷೇತ್ರಕ್ಕೂ ಭೂಸನೂರ ಅವರನ್ನು ಕಡೆಗಣಿಸಿ, ಬೇರೋಬ್ಬರಿಗೆ ಮಣೆ ಹಾಕುತ್ತಿರುವುದು ಸಹ ಅಸಮಧಾನಕ್ಕೆ ಕಾರಣವಾಗಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಹೀಗೆ ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷವನ್ನು ಹಾಳು ಮಾಡುತ್ತಿರುವುದು ಸಹ ಅಸಮಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande