
ಧಾರವಾಡ, 04 ಜನವರಿ (ಹಿ.ಸ.) :
ಆ್ಯಂಕರ್ : ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ರಕ್ಷಣೆ ನೀಡುವ ಉದ್ದೇಶದಿಂದ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಹೊಸದಾಗಿ ಅಕ್ಕ ಪಡೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಿದ್ದು, ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಮಹೀಂದ್ರಾ ಬೊಲೆರೋ ವಾಹನಗಳನ್ನು ಖರೀದಿಸಿ, ನೋಂದಾಯಿಸಲ್ಪಟ್ಟಿರುವ ವಾಹನಗಳನ್ನು ಆಯಾ ಜಿಲ್ಲೆಗಳಿಗೆ ಮರುಹಂಚಿಕೆ ಮಾಡಿರುತ್ತಾರೆ. ಹಾಗೂ ನಾಲ್ಕು ಮಹಿಳಾ ಗೃಹರಕ್ಷಕರನ್ನೊಳಗೊಂಡ ಒಂದು ತಂಡವನ್ನು ಪ್ರತಿ ಜಿಲ್ಲೆಗೆ ರಚನೆ ಮಾಡಲಾಗಿರುತ್ತದೆ.
ಜನೆವರಿ 05, 2026 ರಂದು ಧಾರವಾಡ ಸೃಜನಾ ರಂಗ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಧಾರವಾಡ ಜಿಲ್ಲೆಯ ಪಂಚ ಗ್ಯಾರಂಟಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಸರ್ಕಾರದಿಂದ ಜಾರಿಯಾಗಿರುವ ಹೊಸ ಅಕ್ಕಪಡೆ ಯೋಜನೆಗೆ ಅಧಿಕೃತ ಚಾಲನೆ ನೀಡುವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa