
ಗದಗ, 04 ಜನವರಿ (ಹಿ.ಸ.) :
ಆ್ಯಂಕರ್ : ಗದಗ–ಬೆಟಗೇರಿ ಅವಳಿ ನಗರದ ಬಡ ಹಾಗೂ ವಸತಿ ರಹಿತ ಕುಟುಂಬಗಳ ಸಹನೆ ಕಟ್ಟೆತ್ತ ಮುರಿಯುವ ಹಂತ ತಲುಪಿದೆ. ಸ್ವಂತ ಸೂರು ಇಲ್ಲದೆ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ 348 ವಸತಿ ರಹಿತ ಕುಟುಂಬಗಳು, ಅರ್ಹರಾಗಿದ್ದರೂ ಮನೆಗಳು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಹತ್ತಾರು ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇದೀಗ ಉಗ್ರ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ. ಗದಗ–ಬೆಟಗೇರಿ ಅವಳಿ ನಗರದ ವಸತಿ ರಹಿತ ಕುಟುಂಬಗಳು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸ್ವಂತ ಮನೆಗಾಗಿ ಹೋರಾಟ ನಡೆಸುತ್ತ ಬಂದಿವೆ. ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು 348 ಕುಟುಂಬಗಳಿಗೆ ಮನೆಗಳನ್ನು ನೀಡುವ ಭರವಸೆ ನೀಡಿದ್ದು, ಮಂಜೂರಾತಿ ಪತ್ರವನ್ನೂ ನೀಡಲಾಗಿದೆ ಎನ್ನಲಾಗಿದೆ. ಆದರೆ ಆ ಭರವಸೆ ಇನ್ನೂ ಕಾಗದಕ್ಕಷ್ಟೇ ಸೀಮಿತವಾಗಿದ್ದು, ನೈಜ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರವಾಗಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗದಗ ನಗರದ ಗಂಗಿಮಡಿ ಪ್ರದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ 3630 ಗುಂಪು ಮನೆಗಳ ಯೋಜನೆ ಜಾರಿಯಲ್ಲಿದೆ. ಮೊದಲ ಹಂತದಲ್ಲಿ 1008 ಮನೆಗಳ ಕಾಮಗಾರಿ ಆರಂಭಗೊಂಡಿದ್ದು, ಇದುವರೆಗೆ ಕೇವಲ 240 ಮನೆಗಳನ್ನು ಮಾತ್ರ ಹಸ್ತಾಂತರಿಸಲಾಗಿದೆ. ಉಳಿದ 763 ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವರ್ಷಗಳೇ ಕಳೆದರೂ ಪೂರ್ಣಗೊಳ್ಳದಿರುವುದು ವಸತಿ ರಹಿತ ಕುಟುಂಬಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತಿಚೆಗೆ ಹಸ್ತಾಂತರಗೊಂಡ ಮನೆಗಳೂ ಕೂಡ ನೈಜ ಅರ್ಹ ಫಲಾನುಭವಿಗಳಿಗೆ ಸಿಗದೆ, ಈಗಾಗಲೇ ಗದಗ–ಬೆಟಗೇರಿ ಅವಳಿ ನಗರದಲ್ಲಿ ಮನೆಗಳನ್ನು ಹೊಂದಿರುವ ಉಳ್ಳವರ ಪಾಲಾಗಿವೆ ಎಂದು ಆರೋಪಿಸಲಾಗಿದೆ. ಕೆಲವರು ಈ ಮನೆಗಳಲ್ಲಿ ವಾಸ ಮಾಡದೇ, ಬಾಡಿಗೆಗೆ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ನಿಜವಾದ ಬಡ ಕುಟುಂಬಗಳು ಬಾಡಿಗೆ ನೀಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಮಹಿಳೆಯರು ಕಣ್ಣೀರು ಹಾಕುತ್ತಾ ತಮ್ಮ ನೋವು ಹೊರಹಾಕಿದ್ದಾರೆ.
“ನಮಗೆ ಸ್ವಂತ ಸೂರು ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ವರ್ಷಗಳಿಂದ ಕಾಯುತ್ತಿದ್ದೇವೆ. ಆದರೆ ಮನೆಗಳು ಉಳ್ಳವರಿಗೆ ಹೋಗುತ್ತಿವೆ. ನೈಜ ವಸತಿ ರಹಿತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ವಸತಿ ರಹಿತ ಕುಟುಂಬಸ್ಥರು, ಕೂಡಲೇ ಅರ್ಧಕ್ಕೆ ನಿಂತಿರುವ ಗುಂಪು ಮನೆಗಳ ಕಾಮಗಾರಿ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗದಗ–ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿರುವ 348 ವಸತಿ ರಹಿತ ಕುಟುಂಬಗಳು, ಬೇಡಿಕೆ ಈಡೇರಿಸದಿದ್ದರೆ ನಗರಸಭೆ ಕಚೇರಿ ಎದುರು ಅಹೋರಾತ್ರಿ ಧರಣಿ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಇನಾದರೂ ನಗರಸಭೆ ಆಡಳಿತ ಹಾಗೂ ಸಂಬಂಧಪಟ್ಟ ಸಚಿವರು ಮಧ್ಯ ಪ್ರವೇಶಿಸಿ, ನೈಜ ಫಲಾನುಭವಿಗಳಿಗೆ ಮನೆಗಳ ಹಕ್ಕು ದೊರಕಿಸುವರೇ ಎಂಬುದು ಕಾದು ನೋಡಬೇಕಾದ ಸಂಗತಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP