ಚಿತ್ರದುರ್ಗ ಶಾಖಾ ಕಾಲುವೆ : ಫೆಬ್ರವರಿ ಅಂತ್ಯಕ್ಕೆ ಪ್ರಾಯೋಗಿಕ ನೀರು ಹರಿವು-ಸಚಿವ ಸುಧಾಕರ್
ಚಿತ್ರದುರ್ಗ, 04 ಜನವರಿ (ಹಿ.ಸ.) : ಆ್ಯಂಕರ್ : ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಸಂಬಂಧಿಸಿದಂತೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಹತ್ತಿರದ ವೈ ಜಕ್ಷಂನ್‍ನಿಂದ ಚಿತ್ರದುರ್ಗ ತಾಲ್ಲೂಕಿನ ಗೋನೂರು ಅಕ್ವಡೆಕ್ಟ್ ವರೆಗೆ 114 ಕಿ.ಮೀ ಕಾ
Sudakhar


ಚಿತ್ರದುರ್ಗ, 04 ಜನವರಿ (ಹಿ.ಸ.) :

ಆ್ಯಂಕರ್ : ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಸಂಬಂಧಿಸಿದಂತೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಹತ್ತಿರದ ವೈ ಜಕ್ಷಂನ್‍ನಿಂದ ಚಿತ್ರದುರ್ಗ ತಾಲ್ಲೂಕಿನ ಗೋನೂರು ಅಕ್ವಡೆಕ್ಟ್ ವರೆಗೆ 114 ಕಿ.ಮೀ ಕಾಲುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ-2026ರ ಅಂತ್ಯಕ್ಕೆ ಪೂರ್ಣಗೊಂಡ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಭಾನುವಾರ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ತರುವಾಯ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚಿಕ್ಕಸಿದ್ದವ್ವನಹಳ್ಲಿ ಕಾಲುವೆ ಕಾಮಗಾರಿ, ಗೋನೂರು ಬಳಿಯ ಅಕ್ವಡೆಕ್ಟ್ ಕಾಲುವೆ ನಿರ್ಮಾಣ ಕಾಮಗಾರಿ ವೀಕ್ಷಣೆ ನಡೆಸಿದ ಸಚಿವ ಡಿ.ಸುಧಾಕರ್ ನಂತರ ನಗರದ ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಬಳಿಯ ವೈಜಂಕ್ಷನ್ ಕಾಮಗಾರಿ 4 ವರ್ಷಗಳಿಂದ ರೈತರ ಅಡೆತಡೆಯಿಂದಾಗಿ ಬಾಕಿ ಉಳಿದಿತ್ತು. ಕಳೆದ 2025ರ ಮಾರ್ಚ್‍ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಅಬ್ಬಿನಹೊಳಲಿಗೆ ತೆರಳಿ ರೈತರ ಮನ ಒಲಿಸಲಾಯಿತು. ಇದರಿಂದಾಗಿ ಕಾಮಗಾರಿ ಪೂರ್ಣಗೊಂಡಿದೆ. ಇದೇ ರೀತಿ ಹಿರಿಯೂರು ತಾಲ್ಲೂಕಿನಲ್ಲಿದ್ದ ಸಮಸ್ಯೆಯನ್ನು ಸಹ ಪರಿಹರಿಸಲಾಗಿದೆ. ಪ್ರಸಕ್ತ ಸರ್ಕಾರದ ಅವಧಿಯಲ್ಲಿಯೇ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಮುಖ್ಯಮಂತ್ರಿಗಳಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟು, ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು. ಇದರೊಂದಿಗೆ ಪ್ರಸ್ತುತ ಚಿತ್ರದುರ್ಗ ಶಾಖಾ ಕಾಲುವೆಯ ಕಾಮಗರಿಗೆ ಅಗತ್ಯವಿರುವ ರೂ. 300 ಕೋಟಿ ಹಣವನ್ನು ಮಾರ್ಚ್ ಅಂತ್ಯದ ಒಳಗಾಗಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಸಂದರ್ಭದಲ್ಲಿ ಕಡೂರಿನ 22, ಹೊಸದುರ್ಗದ 32, ಹೊಳಲ್ಕೆರೆಯ 30, ಹಿರಿಯೂರಿನ 03 ಹಾಗೂ ಚಿತ್ರದುರ್ಗದ 03 ಸೇರಿ ಒಟ್ಟು 90 ಕೆರೆಗಳಿಗೆ ಅವುಗಳ ಸಾಮಥ್ರ್ಯದ ಶೇ.50 ರಷ್ಟು ನೀರನ್ನು ತುಂಬಿಸಲಾಗುವುದು. ಇದರಿಂದಾಗಿ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆ ತಾಲ್ಲೂಕಿನ 73,946 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ದೊರಕಲಿದೆ. ಗೋನೂರು ಬಳಿಯ 1.94 ಕಿ.ಮೀ. ಉದ್ದದ ಅಕ್ವಾಡೆಕ್ಟ್ ಕಾಮಗಾರಿಯನ್ನು ಆಗಸ್ಟ್-2026ರ ಅಂತ್ಯಕ್ಕೆ ಪೂರ್ಣಗೊಳಿಸಿ ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು. ಸುಮಾರು 120 ಅಡಿ ಎತ್ತರ ಗೋನೂರು ಅಕ್ವಡೆಕ್ಟ್ ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಅಕ್ವಡೆಕ್ಟ್ ಆಗಿದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande