


ಗದಗ, 04 ಜನವರಿ (ಹಿ.ಸ.) :
ಆ್ಯಂಕರ್ : ಸಾವಿರಾರು ಕಿಲೋಮೀಟರ್ ಹಾರಾಟ ಮಾಡಿ ಗದಗಕ್ಕೆ ಲಗ್ಗೆ
ಅವರು ವಿದೇಶದಿಂದ ಪ್ರತಿ ವರ್ಷ ಬರುತ್ತಾರೆ. ಯಾವುದೇ ಪಾಸ್‌ಪೋರ್ಟ್ ಇಲ್ಲ, ವೀಸಾ ತೊಂದರೆ ಇಲ್ಲ, ಕಾನೂನು ಅಡಚಣೆಗಳೂ ಇಲ್ಲ. ಸುಮಾರು ಮೂರು ತಿಂಗಳ ಕಾಲ ಇಲ್ಲಿ ನೆಲೆಸಿ, ಮತ್ತೆ ತಮ್ಮ ದೇಶಕ್ಕೆ ಮರಳುತ್ತಾರೆ. ಅವರನ್ನು ನೋಡಿದರೆ ಜನರು ಸಹಜವಾಗಿಯೇ ಇಷ್ಟಪಡುತ್ತಾರೆ.
ಅವರ ಚಿಲಿಪಿಲಿ ಕಲರವ, ಗುಂಪು ಗುಂಪಾಗಿ ಹಾರಾಟ ನೋಡುತ್ತಿರಲು ಎರಡು ಕಣ್ಣುಗಳೂ ಸಾಲದು. ಅಂಥ ವಿದೇಶಿ ಅತಿಥಿಗಳು ಅಂದರೆ ವಿದೇಶಿ ಹಕ್ಕಿಗಳು. ಚಳಿಗಾಲ ಆರಂಭವಾಗುತ್ತಿದ್ದಂತೆ ಸಾವಿರಾರು ಕಿಲೋಮೀಟರ್ ದೂರದ ದೇಶಗಳಿಂದ ವಲಸೆ ಹಕ್ಕಿಗಳು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯತ್ತ ಮುಖ ಮಾಡುತ್ತಿವೆ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಮಾಗಡಿ ಕೆರೆ ವಿದೇಶಿ ಹಕ್ಕಿಗಳ ಕಲರವದಿಂದ ನೈಸರ್ಗಿಕ ಪಕ್ಷಿದಾಮದ ರೂಪ ಪಡೆದುಕೊಂಡಿದೆ. ಹಕ್ಕಿಗಳ ಆಗಮನದಿಂದ ಮಾಗಡಿ ಕೆರೆ ಸುತ್ತಮುತ್ತಲ ಪ್ರದೇಶ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ.ಬಮಾಗಡಿ ಕೆರೆ ಕೇವಲ ಸ್ಥಳೀಯ ಹಕ್ಕಿಗಳ ತಾಣ ಮಾತ್ರವಲ್ಲ, ದೇಶ-ವಿದೇಶದ ಅನೇಕ ಜಾತಿಯ ಹಕ್ಕಿಗಳಿಗೆ ಆಶ್ರಯ ನೀಡುವ ವಿಶಿಷ್ಟ ಜಲಾಶಯವಾಗಿದೆ.
ಮಂಗೋಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನ, ಲಡಾಕ್ ಸೇರಿದಂತೆ ಹಲವು ದೇಶಗಳ ವಿದೇಶಿ ಹಕ್ಕಿಗಳು ಇಲ್ಲಿ ಚಳಿಗಾಲದ ವಾಸಕ್ಕೆ ಬರುತ್ತವೆ. ಆ ದೇಶಗಳಲ್ಲಿ ತೀವ್ರ ಚಳಿ, ಆಹಾರದ ಕೊರತೆ ಹಾಗೂ ಹವಾಮಾನ ಬದಲಾವಣೆಗಳೇ ಈ ಹಕ್ಕಿಗಳನ್ನು ಸಾವಿರಾರು ಕಿಲೋಮೀಟರ್ ಹಾರಾಟ ಮಾಡಿ ಮಾಗಡಿ ಕೆರೆಗೆ ಬರಲು ಕಾರಣವಾಗಿವೆ.
ಬಾರ್ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್, ಬ್ಲಾಕ್ ಐಬಿಸ್, ಲಿಟಲ್ ಗ್ರೀಬ್, ರೆಡ್ ಥ್ರೋಟ್, ಪಾಂಟೆಡ್ ಸ್ಪಾರೋ ಸೇರಿದಂತೆ ಅನೇಕ ಜಾತಿಯ ಅಪರೂಪದ ವಿದೇಶಿ ಹಕ್ಕಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಪಕ್ಷಿಪ್ರಿಯರಲ್ಲಿ ಖುಷಿ ಮೂಡಿಸಿದೆ. ಹಕ್ಕಿಗಳ ಹಾರಾಟ, ಕೂಗಾಟ, ಕೆರೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯುವ ದೃಶ್ಯಗಳು ನೋಡುಗರ ಮನಸೂರೆಗೊಳ್ಳುತ್ತಿವೆ.
ಕಳೆದ ನಾಲ್ಕೈದು ದಶಕಗಳಿಂದ ಮಾಗಡಿ ಕೆರೆ ವಿದೇಶಿ ಹಕ್ಕಿಗಳ ನೆಚ್ಚಿನ ತಾಣವಾಗಿದ್ದು, ಸ್ಥಳೀಯ ಗ್ರಾಮಸ್ಥರು ಪಕ್ಷಿಗಳಿಗೆ ಯಾವುದೇ ತೊಂದರೆ ನೀಡದೇ ಸಂರಕ್ಷಣೆ ಮಾಡುತ್ತಿರುವುದು ಗಮನಾರ್ಹ. ಮಾನವನ ಹಸ್ತಕ್ಷೇಪ ಕಡಿಮೆ, ನೀರಿನ ಲಭ್ಯತೆ ಹಾಗೂ ಆಹಾರ ಸಂಪನ್ನತೆ ಇರುವುದರಿಂದ ಈ ಕೆರೆ ಹಕ್ಕಿಗಳಿಗೆ ಸುರಕ್ಷಿತ ಆಶ್ರಯವಾಗಿದೆ. ಈ ಬಾರಿ ಸುಮಾರು ಏಳು ಸಾವಿರಕ್ಕೂ ಅಧಿಕ ವಿದೇಶಿ ಹಕ್ಕಿಗಳು ಮಾಗಡಿ ಕೆರೆಗೆ ಲಗ್ಗೆ ಇಟ್ಟಿವೆ ಎಂದು ಪಕ್ಷಿ ಪ್ರಿಯರು ಅಂದಾಜಿಸಿದ್ದಾರೆ.
ಸುಮಾರು ಮೂರು ತಿಂಗಳ ಕಾಲ ಈ ವಿದೇಶಿ ಹಕ್ಕಿಗಳು ಮಾಗಡಿ ಕೆರೆಯಲ್ಲಿ ವಾಸವಿದ್ದು, ಪ್ರತಿದಿನವೂ ತಮ್ಮ ನಿತ್ಯಚಟುವಟಿಕೆಗಳಿಂದ ನೋಡುಗರ ಕಣ್ಮನ ಸೆಳೆಯುತ್ತಿವೆ. ಸಂಜೆ ಹೊತ್ತಾಗ ಆಹಾರಕ್ಕಾಗಿ ಹತ್ತಿರದ ಜಮೀನುಗಳತ್ತ ಹಾರಿಹೋಗುವ ಹಕ್ಕಿಗಳು, ರಾತ್ರಿ ವೇಳೆಗೆ ಮತ್ತೆ ಕೆರೆಯತ್ತ ಮರಳುತ್ತವೆ. ಬೆಳಿಗ್ಗೆ ಜಾವ ಹೊರಟು, ಸುಮಾರು 9 ಗಂಟೆಯ ಹೊತ್ತಿಗೆ ಚಿಲಿಪಿಲಿ ಕಲರವದೊಂದಿಗೆ ಮರಳಿ ಬರುವ ದೃಶ್ಯ ನಯನ ಮನೋಹಕವಾಗಿದೆ. ಹಿಂಡು ಹಿಂಡಾಗಿ ಬಂದು ಕೆರೆಯ ನೀರಿನ ಮೇಲೆ ತೇಲಾಡುವ ಬಾನಾಡಿಗಳ ದೃಶ್ಯಗಳು ಪ್ರಕೃತಿ ಪ್ರೇಮಿಗಳಿಗೆ ಅಪಾರ ಸಂತೋಷ ನೀಡುತ್ತಿವೆ.
ಈ ವಿದೇಶಿ ಹಕ್ಕಿಗಳನ್ನು ಕಣ್ಣಾರೆ ನೋಡಲು ನಿತ್ಯವೂ ಪ್ರವಾಸಿಗರ ದಂಡೇ ಮಾಗಡಿ ಕೆರೆಗೆ ಹರಿದು ಬರುತ್ತಿದೆ. ಮಕ್ಕಳು, ವಿದ್ಯಾರ್ಥಿಗಳು, ಪ್ರಕೃತಿ ಪ್ರೇಮಿಗಳು ಹಾಗೂ ಪಕ್ಷಿ ವೀಕ್ಷಕರು ದೂರ ದೂರದ ಊರುಗಳಿಂದ ಬಂದು ಈ ಅಪೂರ್ವ ದೃಶ್ಯವನ್ನು ಸವಿಯುತ್ತಿದ್ದಾರೆ. ವಿದೇಶಕ್ಕೆ ತೆರಳಿ ಹಕ್ಕಿಗಳನ್ನು ನೋಡಲು ಹಣ ಖರ್ಚು ಮಾಡುವ ಪಕ್ಷಿ ಪ್ರಿಯರು, ತಮ್ಮದೇ ನಾಡಿನ ಮಾಗಡಿ ಕೆರೆಗೆ ಬಂದರೆ ವಿದೇಶಿ ಹಕ್ಕಿಗಳನ್ನು ಸಮೀಪದಿಂದಲೇ ವೀಕ್ಷಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಮಾನವನು ದೇಶ ಬಿಟ್ಟು ಹೋಗಬೇಕಾದರೆ ಅನೇಕ ಕಾನೂನು ಕಟ್ಟಳೆಗಳು, ಪಾಸ್‌ಪೋರ್ಟ್, ವೀಸಾ ಅಗತ್ಯವಿರುವಾಗ, ಈ ವಿದೇಶಿ ಅತಿಥಿಗಳಿಗೆ ಯಾವುದೇ ಅಡಚಣೆ ಇಲ್ಲದೆ ಪ್ರಕೃತಿಯೇ ದಾರಿ ತೆರೆದು ಕೊಟ್ಟಿದೆ. ನೈಸರ್ಗಿಕ ಪಕ್ಷಿದಾಮವಾಗಿರುವ ಮಾಗಡಿ ಕೆರೆಗೆ ಸರ್ಕಾರದ ಮಟ್ಟದಲ್ಲಿ ಇನ್ನಷ್ಟು ಕಾಯಕಲ್ಪ ನೀಡಬೇಕು ಎಂಬುದು ಸ್ಥಳೀಯರ ಹಾಗೂ ಪಕ್ಷಿ ಪ್ರಿಯರ ಒತ್ತಾಯವಾಗಿದೆ. ಸರಿಯಾದ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಿದರೆ ಮಾಗಡಿ ಕೆರೆ ಅಂತಾರಾಷ್ಟ್ರೀಯ ಮಟ್ಟದ ಪಕ್ಷಿದಾಮವಾಗುವ ಎಲ್ಲಾ ಸಾಧ್ಯತೆಗಳಿವೆ.
ವಿದೇಶಿ ಹಕ್ಕಿಗಳ ಕಲರವದಿಂದ ಮಾಗಡಿ ಕೆರೆ ಇಂದು ಕೇವಲ ಜಲಾಶಯವಲ್ಲ, ಪ್ರಕೃತಿಯ ಜೀವಂತ ಉತ್ಸವವಾಗಿ ರೂಪುಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / lalita MP