
ಕೊಪ್ಪಳ, 17 ಜನವರಿ (ಹಿ.ಸ.) :
ಆ್ಯಂಕರ್ : ನಮ್ಮ ಊರು, ನಗರಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಯುತ ವಾತಾವರಣಕ್ಕೆ ಸಹಕರಿಸುವ ಪೌರಕಾರ್ಮಿಕರಿಗೆ ನಿಮ್ಮ ವ್ಯಾಪ್ತಿಯ ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಿ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಫಾಯಿ ಕರ್ಮಚಾರಿ/ಪೌರಕಾರ್ಮಿಕರ ಕುಂದು ಕೊರತೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಕಡ್ಡಾಯವಾಗಿ ನಿಗದಿತ ನಕ್ಷೆಯಲ್ಲಿ ವಿಶ್ರಾಂತಿ ಗೃಹ ಸ್ಥಾಪಿಸಬೇಕು. ನಗರದಲ್ಲಿ ಹೊರಾಂಗಣ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಯಾವುದೇ ಹೋಟೆಲ್‍ಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಅಲ್ಲಿನ ಶೌಚಾಲಯ ಬಳಸಲು ಅವಕಾಶ ಕಲ್ಪಿಸುವುದು ಕಡ್ಡಾಯ. ಇದು ಸಾಂವಿಧಾನಿಕವಾಗಿ ದೇಶದ ಪ್ರತಿಯೊಬ್ಬರ ಹಕ್ಕಾಗಿದ್ದು, ಯಾವುದೇ ವ್ಯವಹಾರದ ಕಡ್ಡಾಯ ನಿಯಮವಿಲ್ಲ. ಹಾಗೆಯೇ ಪ್ರತಿ ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷತಾ ಕೈಗವಸು, ಬೂಟುಗಳು, ಮಾಸ್ಕ್ ಮುಂತಾದ ಸುರಕ್ಷತಾ ಕಿಟ್‍ಗಳನ್ನು ಒದಗಿಸಬೇಕು. ಸಮಯಕ್ಕೆ ಸರಿಯಾಗಿ ಬೆಳಗಿನ ಉಪಾಹಾರವನ್ನು ಕಲ್ಪಿಸಬೇಕು ಎಂದು ಅಧ್ಯಕ್ಷರು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನಿಷ್ಠ ವೇತನ ನಿಯಮದಂತೆ ಖಾಯಂ ಪೌರಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿ ಮಾಡಬೇಕು. ಗೌರವಧನದ ಆಧಾರದಲ್ಲಿ ನೇಮಕವಾಗಿರುವ ಸ್ವಚ್ಛತಾ ಕಾರ್ಮಿಕರಿಗೆ ನಿಯಮಾನುಸಾರ ವೇತನ ಪಾವತಿಸಬೇಕು. ಹಾಗೆಯೇ ಪೌರಕಾರ್ಮಿಕರಿಗೆ ಪಿಎಫ್, ಇಎಸ್‍ಐ ಸೌಲಭ್ಯ ಒದಗಿಸಬೇಕು.
ಗುರುತಿನ ಚೀಟಿಯನ್ನು ನೀಡಬೇಕು. ಪೌರಕಾರ್ಮಿಕರು ಖಾಯಂ ಅಥವಾ ಹೊರಗುತ್ತಿಗೆ ಯಾರೇ ಆದರೂ ಸುರಕ್ಷತಾ ಪರಿಕರಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ನಿರ್ವಹಿಸುವಂತೆ ಕಾರ್ಮಿಕರಿಗೆ ಅರಿವು ಮೂಡಿಸಿ. ಸುರಕ್ಷತೆ ಇಲ್ಲದ ಸ್ವಚ್ಛತಾ ಕಾರ್ಯಗಳು ಪೌರಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತವೆ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರಗಳ ಮೂಲಕ ಪೌರಕಾರ್ಮಿಕರ ನಿಯಮಿತ ಆರೋಗ್ಯ ತಪಾಸಣೆ ಹಾಗೂ ವರ್ಷಕ್ಕೊಮ್ಮೆ ಉನ್ನತ ಮಟ್ಟದ ಆರೋಗ್ಯ ತಪಾಸಣೆ ನಡೆಸಬೇಕು. ತಪಾಸಣೆಯಲ್ಲಿ ಕಂಡುಬಂದ ಯಾವುದೇ ಖಾಯಿಲೆಗಳಿಗೆ ವಿಮಾ ಸೌಲಭ್ಯದಡಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪೌರ ಕಾರ್ಮಿಕರ ಕೆಲಸ ಸಾಮಾನ್ಯವಾದದ್ದಲ್ಲ, ಅದು ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲದ ಕರ್ತವ್ಯವಾದ್ದರಿಂದ ಪೌರ ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಸ್ವಚ್ಛತಾ ಕಾರ್ಮಿಕರಿಗೆ ಪುನರ್ವಸತಿ ಯೋಜನೆಯನ್ನು ಕಲ್ಪಿಸಿಕೊಡಿ. ಪೌರಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಆಗಾಗ್ಗೆ ಸಭೆಯನ್ನು ನಡೆಸಬೇಕು. ಪೌರಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಮಹತ್ವ ನೀಡಿ, ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹ ನೀಡಿ. ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಪ್ರವೇಶ ಒದಗಿಸಬೇಕು. ಸಫಾಯಿ ಕಾರ್ಮಿಕರಿಗೆ ಮೀಸಲಾತಿ ವ್ಯವಸ್ಥೆಯನ್ನು, ಇಪಿಎಫ್ ಮತ್ತು ಇಎಸ್‍ಐ ವ್ಯವಸ್ಥೆಯನ್ನು ಕಲ್ಪಿಸಿ ವೇತನದ ರಸೀತಿ(ಪೇ ಸ್ಲಿಪ್)ಯನ್ನು ನೀಡಬೇಕು. ನಿವೇಶನ ಹೊಂದಿದ ಖಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಂಶೋಧನಾ ಅಧಿಕಾರಿ ಮಹದೇವ ಸ್ವಾಮಿ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ದಿ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಮಂಜುನಾಥ ಡಿ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್