ಸಂವಿಧಾನಬದ್ಧವಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಬೇಕು : ಸಿದ್ದರಾಮಯ್ಯ
ಬೆಂಗಳೂರು, 17 ಜನವರಿ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಸಂವಿಧಾನ
Cm


ಬೆಂಗಳೂರು, 17 ಜನವರಿ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಮತ್ತು ರಕ್ಷಣೆಯನ್ನು ಒದಗಿಸಿದ್ದು, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಪೊಲೀಸರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.

ಯಾರು ತಪ್ಪು ಮಾಡಿದರೂ ಅದು ತಪ್ಪೇ; ಬಲಾಢ್ಯರು ಅಥವಾ ಸಮಾಜಘಾತುಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

ದುರ್ಬಲರು, ಪರಿಶಿಷ್ಟ ಜಾತಿ–ಪಂಗಡದವರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಅನ್ಯಾಯಕ್ಕೆ ಒಳಗಾಗದಂತೆ ರಕ್ಷಿಸುವುದು ಪೊಲೀಸರ ಸಂವಿಧಾನಬದ್ಧ ಕರ್ತವ್ಯ ಎಂದು ಹೇಳಿದರು.

ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್‌ಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ತಾಲೂಕಿನಲ್ಲಿ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಇದೇ ರೀತಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಒಗಳು ಸಮನ್ವಯದಿಂದ ಕೆಲಸ ಮಾಡಿದರೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸುಧಾರಿಸುತ್ತದೆ. ಆದರೆ ಕೆಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ಲೋಪದಿಂದ ಜನರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೊಲೆ, ಸುಲಿಗೆ, ಡಕಾಯಿತಿ ಹಾಗೂ ದರೋಡೆ ಪ್ರಕರಣಗಳ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ಕಡಿಮೆಯಾಗಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತು (ಡ್ರಗ್ಸ್) ಚಟುವಟಿಕೆಗಳು ಹೆಚ್ಚಾಗಿರುವುದು ಗಂಭೀರ ಚಿಂತೆಯ ವಿಷಯವಾಗಿದ್ದು, ಇವುಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳ ಕನ್ವಿಕ್ಷನ್ ದರ ಕಡಿಮೆಯಿರುವುದನ್ನು ಉಲ್ಲೇಖಿಸಿದ ಅವರು, ಅಪರಾಧಿಗಳಿಗೆ ಶಿಕ್ಷೆ ಖಚಿತಪಡಿಸುವಲ್ಲಿ ಪೊಲೀಸರ ತನಿಖಾ ಗುಣಮಟ್ಟ ಅತ್ಯಂತ ಮುಖ್ಯವಾಗಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕನ್ವಿಕ್ಷನ್ ದರ ಕಳೆದ ವರ್ಷ ಶೇ.3ರಿಂದ ಶೇ.12ಕ್ಕೆ ಏರಿರುವುದು ಸ್ವಲ್ಪ ಸುಧಾರಣೆ ಆಗಿದ್ದರೂ, ಇನ್ನಷ್ಟು ಉತ್ತಮಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಪೊಲೀಸರು ಮುಂಜಾಗರೂಕತೆ ವಹಿಸಿದ್ದರೆ ಎಟಿಎಂ ದರೋಡೆ ಪ್ರಕರಣಗಳು, ಬಳ್ಳಾರಿಯ ಬ್ಯಾನರ್ ಗಲಾಟೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಂತಹ ದುರ್ಘಟನೆಗಳನ್ನು ತಪ್ಪಿಸಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಜೈಲುಗಳಲ್ಲಿ ಅವ್ಯವಸ್ಥೆ, ಮಾದಕ ವಸ್ತು ಜಾಲದ ಮೇಲಿನ ನಿಯಂತ್ರಣದಲ್ಲಿ ಯಾವುದೇ ಲೋಪವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಡ್ರಗ್ಸ್ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಿನ ಅಧಿವೇಶನದಲ್ಲೇ ಹೊಸ ಕಾನೂನು ತರಲು ಸರ್ಕಾರ ಸಿದ್ಧವಾಗಿದೆ ಎಂದು ಘೋಷಿಸಿದರು.

ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಅಗತ್ಯವಿದೆ ಎಂದರು.

ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿದ್ದು, ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ಮತ್ತು ನ್ಯಾಯ ಒದಗಿಸುವುದು ಸರ್ಕಾರದ ಅಚಲ ಬದ್ಧತೆ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande