ಬಾಲಕರಿಗೆ ಸೇನಾ ಪೂರ್ವ ಉಚಿತ ತರಬೇತಿ
ಕೊಪ್ಪಳ, 17 ಜನವರಿ (ಹಿ.ಸ.) : ಆ್ಯಂಕರ್ : ಭಾರತೀಯ ಸೇನೆ, ಇತರೆ ಯುನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26 ನೇ ಸಾಲಿನಲ್ಲಿ ಸೇನಾ ಆಯ್ಕೆಯ ಪೂರ್ವ ಸಿ
ಬಾಲಕರಿಗೆ ಸೇನಾ ಪೂರ್ವ ಉಚಿತ ತರಬೇತಿ


ಕೊಪ್ಪಳ, 17 ಜನವರಿ (ಹಿ.ಸ.) :

ಆ್ಯಂಕರ್ : ಭಾರತೀಯ ಸೇನೆ, ಇತರೆ ಯುನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26 ನೇ ಸಾಲಿನಲ್ಲಿ ಸೇನಾ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ರೂ.2.50 ಲಕ್ಷ ಹಾಗೂ ಪ್ರವರ್ಗ- 2(ಎ), 3(ಎ) ಹಾಗೂ 3(ಬಿ) ಗಳಿಗೆ ರೂ.1 ಲಕ್ಷ ಇರುತ್ತದೆ. ಅಭ್ಯರ್ಥಿಯು 10 ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು.

ಜನ್ಮ ದಿನಾಂಕ ಮತ್ತು ವಯಸ್ಸು 10ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ 31 ಜನವರಿ 2026ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು ವಯಸ್ಸನ್ನು ಪರಿಗಣಿಸಲಾಗುವುದು. ಅಭ್ಯರ್ಥಿಯು 2005 ರ ಜನವರಿ 31 ರಿಂದ 2008 ರ ಜನವರಿ 31 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು.

ಜಿಲ್ಲೆಯ ಕನಕಗಿರಿಯಲ್ಲಿ ಭಾರತೀಯ ಸೇನೆ, ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳ ಸೇನಾ ಆಯ್ಕೆ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ. ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಪ್ಪಳ ಇಲ್ಲಿ ಪಡೆದು ಜನವರಿ 31 ರೊಳಗಾಗಿ ಜಿಲ್ಲಾ ಕಚೇರಿಯಲ್ಲಿಯೇ ಖುದ್ದಾಗಿ ಅರ್ಜಿಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 08539-221606 (ಕಚೇರಿ ಸಮಯ ಬೆಳಿಗ್ಗೆ 10:30 ರಿಂದ ಸಂಜೆ 5.30 ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ) ಗೆ ಸಂಪರ್ಕಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande