
ಬೆಂಗಳೂರು, 17 ಜನವರಿ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3000ಕ್ಕೂ ಹೆಚ್ಚು ಕಡೆಗಳಲ್ಲಿ ಹಿಂದು ಸಮ್ಮೇಳನ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸಂಘಟಿತ ಹಾಗೂ ಯೋಜಿತ ರೀತಿಯಲ್ಲಿ ಈ ಕಾರ್ಯಕ್ರಮಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಡೆಯಲಿವೆ ಎಂದು ಸಾಮಾಜಿಕ ಕಾರ್ಯಕರ್ತ ನಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸಂಜೆ ರಾಷ್ಟ್ರೋತ್ಥಾನ ಪರಿಷತ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಾಬ್ದಿ ವರ್ಷದ ಅಂಗವಾಗಿ ಮಂಡಲ ಮಟ್ಟದಲ್ಲಿ ಗಣವೇಷದೊಂದಿಗೆ ವಿಜಯದಶಮಿ ಉತ್ಸವಗಳು, ತಾಲೂಕು ಮಟ್ಟದಲ್ಲಿ ಯುವ ಸಮಾವೇಶಗಳು, ಮನೆಮನೆ ಸಂಪರ್ಕ ಅಭಿಯಾನ, ವಸತಿ ಹಾಗೂ ಮಂಡಲ ಮಟ್ಟದಲ್ಲಿ ಹಿಂದು ಸಮ್ಮೇಳನಗಳು, ತಾಲೂಕು ಮಟ್ಟದಲ್ಲಿ ಸಾಮಾಜಿಕ ಸದ್ಭಾವನಾ ಸಮಾವೇಶಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರಮುಖ ನಾಗರಿಕ ಗೋಷ್ಠಿಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಪೈಕಿ ವಿಜಯದಶಮಿ ಉತ್ಸವಗಳು, ಯುವ ಸಮಾವೇಶಗಳು ಹಾಗೂ ಮನೆಮನೆ ಸಂಪರ್ಕ ಅಭಿಯಾನಗಳು ಈಗಾಗಲೇ ಅತ್ಯಂತ ಯಶಸ್ವಿಯಾಗಿ ನಡೆದಿವೆ ಎಂದು ತಿಳಿಸಿದರು.
ಜನವರಿ 18ರಿಂದ ಫೆಬ್ರವರಿ 1, 2026ರವರೆಗೆ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳ ಮಂಡಲಗಳಲ್ಲಿ ಹಾಗೂ ನಗರ ಪ್ರದೇಶಗಳ ವಸತಿ–ವಾರ್ಡ್ ಮಟ್ಟದಲ್ಲಿ ಹಿಂದು ಸಮ್ಮೇಳನ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 3000ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಲಕ್ಷಾಂತರ ಸಾರ್ವಜನಿಕರು ಹಾಗೂ ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕ ಪ್ರಾಂತದಲ್ಲಿ ಫೆಬ್ರವರಿ 28ರವರೆಗೆ ಹಿಂದು ಸಮ್ಮೇಳನಗಳು ಮುಂದುವರೆಯಲಿವೆ ಎಂದರು.
ಹಿಂದು ಸಮಾಜೋತ್ಸವ ತಾಲೂಕು ಮಟ್ಟದ ಸ್ಥಾನೀಯ ಸಮಿತಿಗಳು ಆಯೋಜಿಸಲಿವೆ. ಸಮಾಜದ ಗಣ್ಯರು, ವಿವಿಧ ಕ್ಷೇತ್ರಗಳ ಮುಖಂಡರು ಮತ್ತು ಸಾಮಾಜಿಕ ಹಿನ್ನೆಲೆಯ ಪ್ರಮುಖರು ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಾರ್ಯಕ್ರಮಗಳ ಮೂಲಕ ಪಂಚಪರಿವರ್ತನೆಯ ಅಂಶಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರದ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಗೋಪೂಜೆ, ಶೋಭಾಯಾತ್ರೆ, ಬೈಕ್ ರ್ರ್ಯಾಲಿ, ಸ್ವದೇಶಿ ಉತ್ಪನ್ನಗಳ ಪ್ರದರ್ಶನ–ಮಾರಾಟ, ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಿಂದು ಸಮಾಜೋತ್ಸವದ ಕಾರ್ಯಕ್ರಮಗಳಲ್ಲಿ ಸಂತ–ಸ್ವಾಮೀಜಿಗಳು, ಸಾಮಾಜಿಕ ಮುಖಂಡರು, ಮಾತೃಶಕ್ತಿ ಹಾಗೂ ವಿಷಯ ತಜ್ಞರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಧರ್ಮ, ಸಂಸ್ಕೃತಿ, ಸಮಾಜ ಮತ್ತು ರಾಷ್ಟ್ರದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ದೇವಾಲಯಗಳು ಸಮಾಜ ಜಾಗೃತಿಯ ಕೇಂದ್ರಗಳಾಗಬೇಕು ಎಂಬ ಆಶಯವನ್ನು ಜನರಿಗೆ ತಲುಪಿಸುವುದು ಈ ಸಮಾಜೋತ್ಸವಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಪ್ಪೇಸ್ವಾಮಿ ಹೇಳಿದರು.
ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರಾಂತಗಳನ್ನು ಒಳಗೊಂಡಂತೆ ರಾಜ್ಯದ ಒಟ್ಟು 3000ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿವಿಧ ಸಂಸ್ಥೆ–ಸಂಘಟನೆಗಳ ಸಹಭಾಗಿತ್ವದೊಂದಿಗೆ ಸ್ಥಾನೀಯ ಹಿಂದು ಸಮಾಜೋತ್ಸವ ಸಮಿತಿಗಳ ಮೂಲಕ ಈ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದು ಸಮಾಜೋತ್ಸವ ಸಮಿತಿ ಜಯನಗರದ ಅಧ್ಯಕ್ಷೆ ಸಾಧನಾ ರಾಜಶೇಖರ್, ಕೆಂಗೇರಿ ಸಮಿತಿಯ ಅಧ್ಯಕ್ಷ ಎಂ. ಮುನಿ ಆಂಜನಪ್ಪ ಹಾಗೂ ಹನುಮಂತನಗರ ಸಮಿತಿಯ ಅಧ್ಯಕ್ಷ ಎ. ರಾಜೇಂದ್ರ ನಾಯ್ಡು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa