

ಕೋಲಾರ, ೧೬ ಜನವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರು ಉತ್ತರ ವಿ ವಿ ಯ ಕುಲಪತಿ ಡಾ.ಬಿ.ಕೆ.ರವಿ ಜಂಗಮಕೋಟೆ ಕ್ರಾಸ್ ಬಳಿ ನೂತನವಾಗಿ ನಿರ್ಮಾಣವಾಗುತಿರುವ ಅಮರಾವತಿ ಕ್ಯಾಂಪಸ್ನಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಿ ವವಿವಿಗೆ ಹಸ್ತಂತರಿಸಲು ಸೂಚನೆ ನೀಡಿದರು.
ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲೇ ಅಮರಾವತಿ ಕ್ಯಾಂಪಾಸ್ಗೆ ಭೇಟಿ ನೀಡಿ ಅಲ್ಲಿ ಮುಕ್ತಾಯ ಹಂತದಲ್ಲಿರುವ ವಿವಿಯ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿ ಅವರು ಮಾತನಾಡುತ್ತಿದ್ದರು.
ಬೆಂಗಳೂರು ಉತ್ತರ ವಿವಿ ಇಡೀ ರಾಜ್ಯಕ್ಕೆ ಮಾದರಿಯಾಗಿರುವಂತೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ, ಪೈಂಟಿಂಗ್, ಬಾಗಿಲು,ಕಿಟಕಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಫೆಬ್ರವರಿ ಅಂತ್ಯದೊಳಗೆ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿವಿ ಅಮರಾವತಿ ಕ್ಯಾಂಪಾಸ್ನಲ್ಲಿ ಉತ್ತಮ ಪರಿಸರದೊಂದಿಗೆ ವಿದ್ಯಾರ್ಥಿ ಸ್ನೇಹಿ ವಾತಾವರಣ ಸೃಷ್ಟಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿಸುವ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯ ಎಂದು ತಿಳಿಸಿ, ಶೀಘ್ರ ಕಾಮಗಾರಿ ಮುಗಿದು ಇಲ್ಲೇ ಮುಂದಿನ ಶೈಕ್ಷಣಿಕ ವರ್ಷದಿಂದ ವಿವಿಯ ಕೆಲಸ ಕಾರ್ಯಗಳು ನಡೆಯಲಿ ಎಂದರು.
೧೬೮ ಎಕರೆ ಜಾಗ ನಮ್ಮ ಸ್ವಾಧೀನಕ್ಕೆ ಸಿಕ್ಕಿದೆ ಎಂದ ಅವರು, ವಿವಿ ಕಾಮಗಾರಿ ಪೂರ್ಣ ಗೊಳ್ಳುವ ಕಾಲ ಹತ್ತಿರವಾಗಿದೆ ಎಂದರು.
ವಿವಿ ಕ್ಯಾಂಪಾಸ್ನಲ್ಲಿ ಆರಂಭವಾಗುವಷ್ಟರೊಳಗೆ ಇಲ್ಲಿ ನೆಟ್ಟಿರುವ ಗಿಡಮರಗಳಿಂದ ಕೂಡಿದ ಸುಂದರ ಪರಿಸರ ಕಲಿಕಾರ್ಥಿಗಳನ್ನು ಕೈಬೀಸಿ ಕರೆಯಲಿದೆ ಎಂದರು.
ಉತ್ತಮ ಕಲಿಕೆಗೆ ಸುಂದರ ಪರಿಸರ, ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿ ಅಗತ್ಯವಿದೆ ಎಂದ ಅವರು, ಬೆಂಗಳೂರು ಉತ್ತರ ವಿವಿಯಲ್ಲಿ ಈ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಎಲ್ಲಾ ಸಂಯೋಜನೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕ್ಯಾಂಪಾಸ್ನಲ್ಲಿ ಆದಷ್ಟು ಶೀಘ್ರ ವಿವಿ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ಈ ಕ್ಯಾಂಪಾಸ್ ರಾಜ್ಯದ ಎಲ್ಲಾ ವಿವಿಗಳಿಗೆ ಮಾದರಿಯಾಗಿ ಅಭಿವೃದ್ದಿಪಡಿಸುವ ಇಂಗಿತ ವ್ಯಕ್ತಪಡಿಸಿದರು.
ಬೆಂಗಳೂರು ವಿವಿ ಪ್ರತ್ಯೇಕಗೊಂಡು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು
ಸಂಪರ್ಕಿಸುವ ಈ ಜಾಗದಲ್ಲಿ ವಿವಿ ಕ್ಯಾಂಪಾಸ್ ನಿರ್ಮಾಣಗೊಳ್ಳುತ್ತಿದೆ, ಇದು ಎರಡು ಜಿಲ್ಲೆಗಳ ನಡುವೆ ಸೌಹಾರ್ದತೆ ಕಾಪಾಡುವುದರ ಜತೆಗೆ ಈ ಎರಡು ಜಿಲ್ಲೆ ಸೇರಿದಂತೆ ವಿವಿ ವ್ಯಾಪ್ತಿಯ ಜಿಲ್ಲೆಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬುನಾದಿ ಕಲ್ಪಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿವಿಯ ಅಕಾಡಮಿಕ್ ಕೌನ್ಸಿಲ್ ಸದಸ್ಯ ರಾಮಚಂದ್ರ, ಅಭಿಯಂತರ ಕೌಶಿಕ್, ವಿವಿಯ ಶ್ರೀನಿವಾಸರಾವ್ ಸೇರಿದಂತೆ ವಿವಿಯ ಅಧಿಕಾರಿಗಳು ಇದ್ದರು.
ಚಿತ್ರ ; ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಬಳಿ ನೂತನವಾಗಿ ನಿರ್ಮಾಣ ವಾಗುತಿರುವ ಅಮರಾವತಿ ಕ್ಯಾಂಪಸ್ನಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಉತ್ತರ ವಿ ವಿ ಯ ಕುಲಪತಿ ಡಾ.ಬಿ.ಕೆ.ರವಿ ಪರಿಶೀಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್