
ಬೆಂಗಳೂರು, 16 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, “ಕುಮಾರಸ್ವಾಮಿ ಅವರ ಆಡಳಿತ ಕಾಲದಲ್ಲೇ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಯಾರ ಅಧಿಕಾರದಲ್ಲಿ ಅಧಿಕಾರಿಗಳಿಗೆ ಏನಾಗಿದೆ ಎಂಬುದನ್ನು ದಾಖಲೆ ತೆರೆದು ನೋಡಲಿ, ಸತ್ಯ ಗೊತ್ತಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಯಾರೇ ಆಗಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಕ್ರಮ ಖಚಿತ. ಈ ಸರ್ಕಾರ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ನೀಡುತ್ತಿದೆ” ಎಂದರು.
ಸಿದ್ದರಾಮಯ್ಯ ಅವರನ್ನು ‘ಲೀಸ್ ಬೇಸ್ಡ್ ಸಿಎಂ’ ಎಂದು ಕುಮಾರಸ್ವಾಮಿ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಮಹದೇವಪ್ಪ, “ಸಿದ್ದರಾಮಯ್ಯ 7.6 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಲೀಸ್ ಅಂದರೆ ಮೂರು-ನಾಲ್ಕು ತಿಂಗಳು. ಇಂಥ ಹಾಸ್ಯಾಸ್ಪದ ಮಾತುಗಳಿಗೆ ಅರ್ಥವೇ ಇಲ್ಲ. ಕುಮಾರಸ್ವಾಮಿ ಎಷ್ಟು ವರ್ಷ ಸಿಎಂ ಆಗಿದ್ದರು ಎಂಬುದನ್ನು ಜನರಿಗೆ ಗೊತ್ತಿದೆ” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa