ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನೇಪಾಳದ ಕಠ್ಮಂಡು ವಿಮಾನ ನಿಲ್ದಾಣ ಪುನರಾರಂಭಗೊಂಡ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ನೆರವಾಗಲು ಭಾರತ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ.
ಏರ್ ಇಂಡಿಯಾ ಬುಧವಾರ ರಾತ್ರಿ ದೆಹಲಿಯಿಂದ ಕಠ್ಮಂಡುವಿಗೆ ವಿಶೇಷ ವಿಮಾನ (AI 221) ಕಳುಹಿಸಿತು. ರಾತ್ರಿ 8:30ರ ಸುಮಾರಿಗೆ ದೆಹಲಿಯಿಂದ ಹೊರಟ ಈ ವಿಮಾನ ಕಠ್ಮಂಡು ತಲುಪಿದ್ದು, ಹಿಂದಿರುಗುವಾಗ AI 222 ವಿಮಾನವು ಬೆಳಿಗ್ಗೆ 1 ಗಂಟೆಗೆ ಕಠ್ಮಂಡುವಿನಿಂದ ದೆಹಲಿಗೆ ಮರಳಲು ಸಿದ್ಧವಾಗಿದೆ. ಈ ವಿಶೇಷ ವಿಮಾನದಲ್ಲಿ ಸುಮಾರು 170 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
ಏರ್ ಇಂಡಿಯಾ ನೀಡಿರುವ ಮಾಹಿತಿಯಂತೆ , ಗುರುವಾರ ದೆಹಲಿಯಿಂದ ಕಠ್ಮಂಡುವಿಗೆ 6 ನಿಯಮಿತ ವಿಮಾನಗಳು ಹಾಗೂ ಕಠ್ಮಂಡುವಿನಿಂದ 6 ವಿಮಾನಗಳು ದೆಹಲಿಗೆ ಹಾರಾಟ ನಡೆಸಲಿವೆ. ಜೊತೆಗೆ, ಮತ್ತೊಂದು ವಿಶೇಷ ವಿಮಾನವನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಒಟ್ಟು 7 ವಿಮಾನಗಳು ದೆಹಲಿಯಿಂದ ಕಠ್ಮಂಡುವಿಗೆ ಹೊರಡಲಿದ್ದು, 7 ವಿಮಾನಗಳು ಹಿಂದಿರುಗಲಿವೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪ್ರಕಟಣೆ ನೀಡಿದ್ದು, “ನೇಪಾಳದಲ್ಲಿ ವಿಮಾನ ನಿಲ್ದಾಣ ಮುಚ್ಚಿದ್ದರಿಂದ ಅನೇಕ ಪ್ರಯಾಣಿಕರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಲಿಲ್ಲ. ಈಗ ವಿಮಾನ ನಿಲ್ದಾಣ ಪುನರಾರಂಭವಾಗಿದೆ. ಭಾರತ ಸರ್ಕಾರ ಏರ್ ಇಂಡಿಯಾ ಮತ್ತು ಇಂಡಿಗೊ ಸಂಸ್ಥೆಗಳ ಸಹಯೋಗದಲ್ಲಿ ಇಂದು ಸಂಜೆ ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡುತ್ತಿದೆ. ನಾಳೆಯಿಂದ ನಿಯಮಿತ ವಿಮಾನಗಳೂ ಪುನರಾರಂಭಗೊಳ್ಳಲಿವೆ” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa