ಹುಬ್ಬಳ್ಳಿ, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ಕ್ಷೇತ್ರದ ಕುರಿತು ನಡೆದಿರುವ ಅಪಪ್ರಚಾರಕ್ಕೆ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಸೇರಿದಂತೆ ಹಲವು ಸಂಘಟನೆಗಳು ಖಂಡಿಸಿವೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಮುಖಂಡರು, ಸುಳ್ಳು ಪ್ರಚಾರದ ಮೂಲಕ ಕೆಲವು ಸಮಾಜಘಾತುಕ ಶಕ್ತಿಗಳು ಶ್ರೀಕ್ಷೇತ್ರ ಧರ್ಮಸ್ಥಳವನ್ನು ವಿವಾದಕ್ಕೀಡು ಮಾಡುತ್ತಿವೆ, ಕ್ಷೇತ್ರದ ಪಾವಿತ್ರ್ಯವನ್ನೂ ಹಾಳು ಮಾಡುತ್ತಿವೆ, ಇದು ಅತ್ಯಂತ ಖಂಡನೀಯ ಎಂದರು. ನೂರಾರು ವರ್ಷಗಳಿಂದ ಕೋಟ್ಯ0ತರ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ಈ ವಿವಾದದಲ್ಲಿ ಅನವಶ್ಯಕವಾಗಿ ಎಳೆದು ತರಲಾಗುತ್ತಿದೆ. ಇದು ಅತ್ಯಂತ ವಿಷಾದದ ಸಂಗತಿ ಎಂದರು.
ಸೌಜನ್ಯ ಸಾವಿನ ವಿಷಯದಲ್ಲಿ ಸಿಬಿಐ ವಿಚಾರಣೆಯಾಗಿ ನ್ಯಾಯಾಲಯದ ತೀರ್ಪು ಕೂಡ ಬಂದು ಪ್ರಕರಣ ಇತ್ಯರ್ಥಗೊಂಡಿದೆ. ಅದಾಗ್ಯೂ ಕೆಲವು ಶಕ್ತಿಗಳು, ನಾನಾ ಕಾರಣಗಳಿಂದ ಮೃತಪಟ್ಟ ಕೆಲವು ವ್ಯಕ್ತಿಗಳ ಸಾವಿನ ಸುತ್ತ ಕಥೆಗಳನ್ನು ಹೆಣೆದು, 200-300 ಬುರುಡೆಗಳನ್ನು ಧರ್ಮಸ್ಥಳ ಕ್ಷೇತ್ರದ ಸುತ್ತಮುತ್ತ ಹೂಳಲಾಗಿದೆ ಎಂಬಂಥ ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸಿ ಹರಡುತ್ತಿವೆ. ಹಿಂದೂಗಳ ಆರಾಧ್ಯ ದೈವ ಮಂಜುನಾಥ ಸ್ವಾಮಿ, ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳು ಮತ್ತು ಕುಟುಂಬದವರ ಹೆಸರನ್ನು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುತ್ತಿರುವುದು ದುರದೃಷ್ಟಕರವಾಗಿದೆ ಎಂದರು.
ಕರ್ನಾಟಕ ಸರ್ಕಾರವು ನ್ಯಾಯಯುತವಾಗಿ ತನಿಖೆ ನಡೆಸುತ್ತಿದೆ. ಆದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ತಮಗೆ ತೋಚಿದಂತೆ ಹೇಳಿಕೆ ನೀಡುತ್ತಿವೆ. ಇಂಥ ಆಧಾರ ರಹಿತ ಹೇಳಿಕೆಗಳಿಂದ ದೇಶಾದ್ಯಂತ ಇರುವ ಮಂಜುನಾಥಸ್ವಾಮಿಯ ಭಕ್ತಾದಿಗಳಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ನಡೆದಿದೆ. ಇದು ಕೂಡಲೇ ನಿಲ್ಲುವಂತಾಗಬೇಕು ಎಂದು ಆಗ್ರಹಿಸಿದರು.
ಅನಾಮಧೇಯ ವ್ಯಕ್ತಿ ಹಾಗೂ ತನಿಖೆಯ ನೆಪದಲ್ಲಿ ಕ್ಷೇತ್ರಕ್ಕೆ, ಧರ್ಮಾಧಿಕಾರಿಗಳಿಗೆ ಹಾಗೂ ಅವರ ಕುಟುಂಬದವರ ಗೌರವಕ್ಕೆ ಧಕ್ಕೆ ಉಂಟು ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಯಾರೇ ಇರಲಿ ನೆಲದ ಕಾನೂನು ಪಾಲನೆ ಮುಖ್ಯ ಎಂದು ಅಭಿಪ್ರಾಯಪಟ್ಟ ಮುಖಂಡರು, ಸತ್ಯಾಸತ್ಯತೆ ತಿಳಿಯದೇ ಶ್ರೀ ಕ್ಷೇತ್ರದ ಮೇಲೆ ಗೂಬೆ ಕೂರಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ತನಿಖೆಯಿಂದ ಸತ್ಯ ಹೊರಬಂದೇ ಬರುತ್ತದೆ. ಆಗ ತಪ್ಪು ಮಾಡಿದವರ ಮುಖವಾಡ ಕಳಚಿಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಸತ್ಯ ಹೊರಬರುವವರೆಗೆ ಎಲ್ಲರೂ ಸಯಂಮದಿಂದ ಇರಬೇಕು. ತನಿಖೆಯನ್ನು ಧರ್ಮಾಧಿಕಾರಿಗಳೇ ಸ್ವಾಗತಿಸಿದ್ದಾರೆ. ಈ ಹಂತದಲ್ಲಿ ಏನನ್ನೂ ಮಾತನಾಡುವುದು ಸರಿ ಅಲ್ಲ ಎಂದು ಭಾವಿಸಿ, ಅವರು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಮೆರೆಯುತ್ತಿದ್ದಾರೆ. ಆದರೆ ಅವರ ಮೌನದ ಗಾಂಭಿರ್ಯದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಆಧಾರರಹಿತ ಟೀಕೆಗಳು ಕೇಳಿಬರುತ್ತಿವೆ. ನಮಗೆಲ್ಲ ಧರ್ಮಾಧಿಕಾರಿಗಳ ನಡೆ-ನುಡಿಯ ಬಗ್ಗೆ ನಮಗೆ ಅಭಿಮಾನವಿದೆ. ಆದರೆ ಕಂಡಕಂಡವರೆಲ್ಲ ಅಂಥ ಮಹಾನ್ ವ್ಯಕ್ತಿಗಳ ಬಗ್ಗೆ ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುವುದು ತರವಲ್ಲ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಉಪಾಧ್ಯಕ್ಷರುಗಳಾದ ರಾಜೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಕಾರ್ಯದರ್ಶಿ ಪ್ರದೀಪ್ ಪರ್ಕಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa