ವಿಜಯಪುರ, 13 ಆಗಸ್ಟ್ (ಹಿ.ಸ.)
ಆ್ಯಂಕರ್: ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಜುಲೈ -೨೦೨೫ರ ಅಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು. ಎಸ್‌ಸಿಪಿ ಟಿಎಸ್‌ಪಿ ಅನುದಾನ ಉಳಿಕೆಯಾಗದಂತೆ ನೋಡಿಕೊಂಡು ಸಮರ್ಪಕವಾಗಿ ಬಳಕೆ ಮಾಡುವಂತೆ ಸೂಚಿಸಲಾಯಿತು.
ವಿವಿಧ ನಿಮಗಮಗಳಿಂದ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬ ಒದಗಿಸುವಂತೆಯೂ, ಅವಶ್ಯ ಇರುವ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮವಹಿಸಬೇಕು. ಎಲ್ಲಾ ಇಲಾಖೆಗಳು ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿಯ ನಿಗದಿತ ಗುರಿಯನ್ನು ಕಾಲಮಿತಿಯೊಳಗೆ ಸಾಧಿಸುವಂತೆ ಸೂಚಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ನಿರ್ಮೂಲನೆಗೆ ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಮೂಡಿಸಬೇಕು. ಆಯುಷ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಮಹತ್ವದ ಕುರಿತು ತಿಳಿ ಹೇಳುವ ಹಾಗೂ ಕಾಲಕಾಲಕ್ಕೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಮೀನುಗಾರಿಕೆ ವೃತ್ತಿಯಲ್ಲಿ ನೂರಾರು ಕುಟುಂಬಗಳು ತೊಡಗಿಸಿಕೊಂಡಿಸಿವೆ. ಇಂತಹ ಅರ್ಹ ಫಲಾನುಭವಿಗಳಿಗೆ ಲೈವ್ ಜಾಕೆಟ್ ಸೇರಿದಂತೆ ಅಗತ್ಯ ಪೂರಕ ಪರಿಕರಗಳನ್ನು ಒದಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಲಾಯಿತು.
ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ವಸತಿ ಶಾಲೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುವ ಮೂಲಕ ಅವರು ಓದಿನೊಂದಿಗೆ ರಾಜ್ಯದ ಪರಂಪರೆ,ಇತಿಹಾಸ,ಐತಿಹಾಸಿಕ ತಾಣಗಳನ್ನು ವೀಕ್ಷಣೆ ಮಾಡುವುದರಿಂದ ಮತ್ತಷ್ಟು ವಿಷಯದ ಜ್ಞಾನಾರ್ಜನೆಗೆ ಇಂಬು ನೀಡಿದಂತಾಗುತ್ತದೆ ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಅನುಷ್ಠಾನಗೊಳಿಸಲು ಜಿಲ್ಲೆಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಗಾಗ ಕಲಾ ತರಬೇತಿ,ಕಮ್ಮಟ ಆಯೋಜನೆಗೆ ಸೂಚನೆ ನೀಡಲಾಯಿತು. ತಾಲೂಕಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಗಳನ್ನು ಕಾಲಕಾಲಕ್ಕೆ ನಡೆಸಬೇಕು. ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ನಿಗದಿಪಡಿಸಿದ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಅನುಷ್ಟಾನಗೊಳಿಸುವಂತೆ ಅವರು ಸೂಚಿಸಿದರು.
ಈ ಸಭೆಯಲ್ಲಿ ಕೃಷಿ ಇಲಾಖೆ,ತೋಟಗಾರಿಕೆ,ರೇಷ್ನೆ,ಪಶು ಸಂಗೋಪನಾ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ನಗರಾಭಿವೃದ್ಧಿ ಕೋಶ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಘೋಣಸಗಿ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಹೆಸ್ಕಾಂನ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಪಾಲಿಕೆಯ ಅಧೀಕ್ಷಕ ಅಭಿಯಂತರರಾದ ತಿಮ್ಮಪ್ಪ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande