ಬಳ್ಳಾರಿ, 13 ಆಗಸ್ಟ್ (ಹಿ.ಸ.)
ಆ್ಯಂಕರ್: ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿಗಳು ಮುಂದಾಗಿದ್ದರು. ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುವ “ಮಹಾಂತ ಜೋಳಿಗೆ” ಕಾರ್ಯವು ಇಡೀ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಪ್ರಸಿದ್ಧಿ ಪಡೆಯಿತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ ಪರಮಶಿವ ಮೂರ್ತಿ ಅವರು ಹೇಳಿದ್ದಾರೆ.
ಹಂಪಿ ಕಮಲಾಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠ, ಸಿದ್ಧಯ್ಯನಕೋಟೆ ಹಾಗೂ ಚಿತ್ತರಗಿಚ್ಚಿ ಜ್ಯೋತಿ ಸಾಂಸ್ಕøತಿಕ ಕಲಾ ಮತ್ತು ಕ್ರೀಡಾ ಸಂಘದ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ಮಹಾಂತ ಜೋಳಿಗೆ ಹಾಗೂ “ಮಕ್ಕಳ ಬದುಕಿಗೆ ಶರಣರ ಚಿಂತನೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡಿದರು.
ಡಾ.ಮಹಾಂತ ಶಿವಯೋಗಿಗಳು ಜನರಲ್ಲಿ ಹಣವನ್ನು ಕೇಳಲಿಲ್ಲ, ಹಣ್ಣು ಹಂಪಲು ಕೇಳಲಿಲ್ಲ, ಪೂಜೆ ಮಾಡಿ ಎಂದು ಹೇಳಲಿಲ್ಲ, ಬದಲಾಗಿ ನಿಮ್ಮಲ್ಲಿರುವ ದುಶ್ಚಟ- ದುವ್ರ್ಯಸನಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳುತ್ತಿದ್ದರು ಎಂದು ತಿಳಿಸಿದರು.
ಸಂಸಾರದಲ್ಲಿ ಆನೇಕ ಪಾತ್ರಗಳನ್ನು ನಿಭಾಯಿಸುವ ಸಂದರ್ಭಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಅನೇಕ ದುಶ್ಚಟಗಳು, ದುರ್ಗುಣಗಳು ಆಕರ್ಷಿಸುತ್ತವೆ. ನಿಮ್ಮ ಬಹುಪಾಲು ಸಮಯವನ್ನು ಕಿತ್ತುಕೊಳ್ಳುತ್ತವೆ. ಹಾಗಾಗಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಬೆಳೆಯುತ್ತಿರುವ ಸಮಾಜಕ್ಕೆ ಮದ್ಯಪಾನ ಮಾರಕ ಎಂಬುದನ್ನು ಅರಿತ ಮಹಾತ್ಮಾ ಗಾಂಧೀಜಿಯವರು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಧ್ಯಪಾನ ವಿರೋಧಿಸಿ ಅಭಿಯಾನ ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ಡಾ.ಮಹಾಂತ ಶಿವಯೋಗಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಿ, ಅನಾಚಾರ ತಡೆಗಟ್ಟಲು ಹಗಲಿರುಲು ಶ್ರಮಿಸಿದರು ಎಂದು ತಿಳಿಸಿದರು.
ಹಿರಿಯ ಪ್ರಾಧ್ಯಾಪಕ ಹಾಗೂ ದಲಿತ ಅಧ್ಯಯನ ಪೀಠದ ನಿರ್ದೇಶಕ ಚಿನ್ನಸ್ವಾಮಿ ಸೊಸಲೆ ಅವರು ಮಾತನಾಡಿ ಡಾ.ಮಹಾಂತ ಶಿವಯೋಗಿಗಳ ಆದರ್ಶಗಳನ್ನು ಇಂದಿನ ಯುವ ಜನತೆ ಅರಿತು ಪಾಲಿಸುವುದರ ಮೂಲಕ ದುಶ್ಚಟಗಳನ್ನು ತೊರೆದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ನಿಸ್ಸಾರಮದ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಹಾಗೂ ದೇಶವನ್ನು ಹಾಳು ಮಾಡುವ ದುವ್ರ್ಯಸನಗಳು, ದುಶ್ಚಟಗಳು ಹಾಗೂ ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು. ಅವರ ಬದುಕು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಡಿಪಾಗಿತ್ತು. ಅವರ ಆಶಯದಂತೆ ವ್ಯಸನಮುಕ್ತ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಿದ್ದಯ್ಯನಕೋಟೆ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ ಮಹಾ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿ ತಂದೆ-ತಾಯಿ ಉತ್ತಮ ಸಂಸ್ಕಾರ ಮಕ್ಕಳಿಗೆ ನೀಡುತ್ತಾರೋ ಆ ಮಕ್ಕಳು ಉತ್ತಮ ಸಂಸ್ಕಾರದತ್ತ ಸಾಗುತ್ತಾರೆ ಎಂದು ಹೇಳಿದರು.
ತಂಬಾಕು ಸೇವನೆಯು ಮನುಷ್ಯನ ಶರೀರವನ್ನು ಹಾಳು ಮಾಡುತ್ತದೆ. ತಂಬಾಕಿನಲ್ಲಿರುವ ನಿಕೋಟಿನ ಎಂಬ ಪದಾರ್ಥವು ತಂಬಾಕು ಸೇವನೆಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಭಾರತದಲ್ಲಿ ವರ್ಷದಲ್ಲಿ ಸರಿಸಮಾರು 7 ಲಕ್ಷ ಜನರು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಸಾವನ್ನಪ್ಪುತ್ತಿದ್ದು, ಅದರಲ್ಲಿ 4 ಲಕ್ಷ ಜನರು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಯುವಕರು ಹೆಚ್ಚಿನವರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರೀಮಠದ ಕಾರ್ಯದರ್ಶಿ ಪಿ.ಆರ್ ಕಾಂತರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಇಡೀ ರಾಷ್ಟ್ರದ ಗಮನಸೆಳೆದ ಇಳಕಲ್ ಮಹಾಂತ ಶಿವಯೋಗಿಗಳ ಜನ್ಮದಿನವನ್ನು ಸರ್ಕಾರವು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಯಲ್ಲಪ್ಪ ಭಂಡಾರಿ ಮತ್ತು ತಂಡದವರಿಂದ ವಚನ ಸಂಗೀತ ಗಾಯನ, ಗಾಯಕ ತಿಮ್ಮನಹಳ್ಳಿ ಡಿ.ಬಿ ನಿಂಗರಾಜು ವಚನ ಗಾಯನ ಪ್ರಸ್ತುತಪಡಿಸಿದರು. ಆರ್.ವಿ.ಮಂಜುನಾಥ ನಿರೂಪಿಸಿದರು. ಶಿಕ್ಷಕ ಪ್ರಭು ವಂದಿಸಿದರು. ಉಪನ್ಯಾಸಕ ವೃಂದದವರು ಸೇರಿದಂತೆ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್