ಬಳ್ಳಾರಿ : ಎಟಿಎಂ ದರೋಡೆ ಯತ್ನ: ಆಂಧ್ರ ಮೂಲದ ಯುವಕನ ಬಂಧನ
ಬಳ್ಳಾರಿ, 13 ಆಗಸ್ಟ್ (ಹಿ.ಸ.) ಆ್ಯಂಕರ್: ಸೋಮವಾರ ರಾತ್ರಿ 01:30ರ ಸುಮಾರಿಗೆ ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೋಲೀಸ್ ಠಾಣೆ ವ್ಯಾಪ್ತಿಯ ಕಾಳಮ್ಮ ಸರ್ಕಲ್ ಹತ್ತಿರದ ಆಕ್ಸಿಸ್ ಬ್ಯಾಂಕ್‍ನ ಎಟಿಎಂನಲ್ಲಿ ದರೋಡೆ ಮಾಡುತ್ತಿದ್ದ ಆಂಧ್ರ ಮೂಲದ ಯುವಕನನ್ನು ಪೊಲೀಸರು ಬಂಧಿಸಿ, ಸಾರ್ವಜನಿಕ ಪ್ರಶಂಸೆಗೆ ಒಳಗಾಗಿ
ಬಳ್ಳಾರಿ : ಆಕ್ಸಿಸ್ ಬ್ಯಾಂಕ್ ಎಟಿಎಂ ದರೋಡೆ ಯತ್ನ, ಪೊಲೀಸರಿಂದ ಆಂಧ್ರ ಯುವಕನ ಬಂಧನ


ಬಳ್ಳಾರಿ, 13 ಆಗಸ್ಟ್ (ಹಿ.ಸ.)

ಆ್ಯಂಕರ್: ಸೋಮವಾರ ರಾತ್ರಿ 01:30ರ ಸುಮಾರಿಗೆ ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೋಲೀಸ್ ಠಾಣೆ ವ್ಯಾಪ್ತಿಯ ಕಾಳಮ್ಮ ಸರ್ಕಲ್ ಹತ್ತಿರದ ಆಕ್ಸಿಸ್ ಬ್ಯಾಂಕ್‍ನ ಎಟಿಎಂನಲ್ಲಿ ದರೋಡೆ ಮಾಡುತ್ತಿದ್ದ ಆಂಧ್ರ ಮೂಲದ ಯುವಕನನ್ನು ಪೊಲೀಸರು ಬಂಧಿಸಿ, ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದ್ದಾರೆ.

ಬಂಧಿತ ಆರೋಪಿಯು ಆರ್. ವೆಂಕಟೇಶ್ ಕೋಡಿಗುಡ್ಡ ತಂದೆ ಲೇಟ್ ಆರ್. ಸುಬ್ರಮಣ್ಯಂ (22) ಆಗಿದ್ದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಾಯಿನಗರದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಆರ್. ವೆಂಕಟೇಶ್ ಆಕ್ಸಿಸ್ ಬ್ಯಾಂಕ್‍ನ ಎಟಿಎಂನಲ್ಲಿ ಸೋಮವಾರ ಮಧ್ಯರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಲು ಯಂತ್ರವನ್ನು ತೆರೆದು, ಪುನಃ ಜೋಡಿಸುತ್ತಿದ್ದಾಗ ಗಸ್ತಿನಲ್ಲಿದ್ದ ಎಎಸ್‍ಐ ಮಲ್ಲಿಕಾರ್ಜುನ ಅವರು ಗಮನಿಸಿ, ಆರೋಪಿಯನ್ನು ಎಟಿಎಂ ಯಂತ್ರದ ಕೋಣೆಯಲ್ಲಿಯೇ ಹಿಡಿದಿದ್ದರು. ಆರೋಪಿಯು ಎಎಸ್‍ಐ ಮಲ್ಲಿಕಾರ್ಜುನ ಅವರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅಷ್ಟರಲ್ಲಿಯೇ ಪೇದೆಗಳಾದ ಅನಿಲ್ ಹಾಗೂ ಸಿದ್ದೇಶ್ ಅವರು ಎಟಿಎಂ ಕೇಂದ್ರಕ್ಕೆ ಬಂದು ದುಷ್ಕರ್ಮಿಯನ್ನು ಬಂಧಿಸಿದ್ದಾರೆ.

ಈ ಘಟನೆಯು ಆಕ್ಸಿಸ್ ಬ್ಯಾಂಕ್‍ನ ಎಟಿಎಂನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವೈರಲ್ ಆಗಿ ಸಾರ್ವಜನಿಕರು ಎಎಸ್‍ಐ ಮಲ್ಲಿಕಾರ್ಜುನ ಅವರ ಸಾಹಸ ಮತ್ತು ಸಕಾಲಿಕ ಕ್ರಮವನ್ನು ಮುಕ್ತವಾಗಿ ಪ್ರಶಂಸೆ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಅವರು ಎಎಸ್‍ಐ ಮಲ್ಲಿಕಾರ್ಜುನ ಅವರನ್ನು ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿಯೇ ಅಭಿನಂದಿಸಿ, ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಎಸ್‍ಪಿ ಚಂದ್ರಕಾಂತ ನಂದಾರೆಡ್ಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande