ಬೆಂಗಳೂರು, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೊಪ್ಪಳದಲ್ಲಿ ಕೆಲ ದಿನಗಳ ಹಿಂದೆ ಬರ್ಬರವಾಗಿ ಹತ್ಯೆಯಾದ ವಾಲ್ಮೀಕಿ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅವರ ಕುಟುಂಬದ ಜೊತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಿಯೋಗವು ರಾಜಭವನಕ್ಕೆ ಬುಧವಾರ ಹೋಗಿ, ಪ್ರಕರಣವನ್ನು ಎನ್‍ಐಎ ತನಿಖೆಗೆ ಒಪ್ಪಿಸಲು ಆಗ್ರಹಿಸಿದೆ.
ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಲ್ಲೋಟ್ ಅವರನ್ನು ರಾಜಭವನದಲ್ಲಿ ಬುಧವಾರ ಭೇಟಿಯಾಗಿ, ಗವಿಸಿದ್ದಪ್ಪನ ಹತ್ಯೆ ಪ್ರಕರಣದಲ್ಲಿ ಸರ್ಕಾರದ ಮೇಲೆ ಒತ್ತಡವೇರಿ ಎನ್‍ಐಎ ತನಿಖೆಗೆ ಒಳಪಡಿಸಬೇಕು. ಕೊಲೆ ಪ್ರಕರಣದ ಕುರಿತು ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ನಿಯೋಗವು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿತು.
ಗವಿಸಿದ್ದಪ್ಪ ನಾಯಕ ಅವರು ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕಾಗಿ ಮತಾಂಧರಿಂದ ಅಮಾನುಷವಾಗಿ ಕೊಲೆಯಾಗಿದ್ದಾನೆ. ಈ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮತಬ್ಯಾಂಕ್ ಓಲೈಕೆಯ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಯುವಕನ ಸಾವಿಗೆ ನ್ಯಾಯ ಸಿಗುವುದಿಲ್ಲ ಎನ್ನುವುದು ಮೃತನ ಕುಟುಂಬ, ಸ್ಥಳೀಯರು ಹಾಗೂ ವಾಲ್ಮೀಕಿ ಸಮುದಾಯದ ಅಭಿಪ್ರಾಯವಾಗಿದೆ ಎಂದು ನಿಯೋಗವು ಆತಂಕವನ್ನು ವ್ಯಕ್ತಪಡಿಸಿದೆ.
ಇದಕ್ಕೆ ಪೂರಕವೆಂಬಂತೆ ಪೆÇಲೀಸ್ ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು, ಕೊಲೆಗಡುಕನನ್ನು ಬಂಧಿಸುವಲ್ಲಿಯೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ತನಿಖೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೂಡಿದೆ ಎಂಬುದು ಸ್ಥಳೀಯರ ಬಲವಾದ ಶಂಕೆಯಾಗಿದೆ ಎಂದು ನಿಯೋಗ ತಿಳಿಸಿದೆ.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಹಾಗೂ ಶ್ರೀಮತಿ ಹೇಮಲತಾ ನಾಯಕ್, ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಎಸ್.ಆರ್. ವಿಶ್ವನಾಥ್, ದೊಡ್ಡನಗೌಡ .ಎಚ್ ಪಾಟೀಲ್, ಮುನಿರತ್ನ, ಬಿ.ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರಾದ ಶಿವನಗೌಡ ನಾಯಕ್, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ರಾಜುಗೌಡ ನಾಯಕ್, ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ್ ದಡೇಸೂಗೂರು, ಬಸವರಾಜ್ ಕ್ಯಾವಟರ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್