
ಬೆಂಗಳೂರು, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2023ರ ವರುಣಾ ವಿಧಾನ ಸಭಾ ಕ್ಷೇತ್ರದ ಗೆಲುವಿಗೆ ಸಂಬಂಧಿಸಿದ ಚುನಾವಣಾ ಅಕ್ರಮ ಆರೋಪ ಪ್ರಕರಣಕ್ಕೆ ಇಂದು ಸರ್ವೋಚ್ಚ ನ್ಯಾಯಾಲಯ ಹೊಸ ತಿರುವು ನೀಡಿದೆ. ಮೈಸೂರಿನ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ಕೈಗೊಂಡ ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಶಂಕರ್ ಅವರ ದೂರಿನಲ್ಲಿ, 2023ರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಆಮಿಷವಾಗಿ ಬಳಸಿಕೊಂಡು ಮತದಾರರನ್ನು ಪ್ರಭಾವಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಗ್ಯಾರಂಟಿ ಕಾರ್ಡ್‌ಗಳ ಮೇಲೆ ಸ್ವತಃ ಸಿದ್ದರಾಮಯ್ಯ ಸಹಿ ಹಾಕಿರುವುದು, ಈ ಆಮಿಷದ ಜವಾಬ್ದಾರಿಯನ್ನು ದೃಢಪಡಿಸುತ್ತದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಈ ರೀತಿಯ ಆಮಿಷ ನೀಡುವುದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(1), 123(2) ಮತ್ತು 123(4)ರ ಉಲ್ಲಂಘನೆ ಎಂದು ಶಂಕರ್ ವಾದಿಸಿದ್ದಾರೆ. ಇದೇ ಆಧಾರದ ಮೇಲೆ ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುವೆಂದು ಘೋಷಿಸುವಂತೆ ಕೇಳಿಕೊಂಡಿದ್ದಾರೆ.
ಈ ವಿಚಾರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಹಿಂದೆಯೇ ಶಂಕರ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸಿದ್ದರಾಮಯ್ಯ ಪರವಾಗಿ ವಾದಿಸಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್, ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಜನರಿಗೆ ಆಶ್ವಾಸನೆ ನೀಡುವುದರಲ್ಲಿ ಕಾನೂನುಬಾಹಿರತೆ ಇಲ್ಲ ಎಂದು ಪ್ರತಿವಾದಿಸಿದ್ದರು. ಈ ವಾದವನ್ನು ಅಂಗೀಕರಿಸಿದ ಹೈಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್ ಈಗ ಇಬ್ಬರಿಗೂ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೋರಿದ್ದು, ಈ ಪ್ರಕರಣಕ್ಕೆ ಮತ್ತೆ ಜೀವ ತುಂಬಿದೆ. ಮುಂದಿನ ವಿಚಾರಣೆಗೆ ದಿನಾಂಕವನ್ನು ಶೀಘ್ರದಲ್ಲೇ ನಿಗದಿ ಮಾಡುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa