ಮುಂದುವರೆದ ಇಂಡಿಗೋ ವಿಮಾನಯಾನ ಬಿಕ್ಕಟ್ಟು
ತಿಳಿ
Indigo


ನವದೆಹಲಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉಂಟಾದ ಬೃಹತ್ ಕಾರ್ಯಾಚರಣೆ ಬಿಕ್ಕಟ್ಟು ಸೋಮವಾರವೂ ತೀರದ ಸ್ಥಿತಿಯಲ್ಲೇ ಮುಂದುವರಿದಿದ್ದು, ದೇಶದ ಹಲವು ವಿಮಾನ ನಿಲ್ದಾಣಗಳಿಂದ 500 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.

ಪರಿಸ್ಥಿತಿಯನ್ನು ತಿಳಿಗೊಳಿಸಲು ಹಾಗೂ ಪ್ರಯಾಣಿಕರಿಗೆ ಮರುಪಾವತಿಯನ್ನು ಶೀಘ್ರಗೊಳಿಸಲು ಇಂಡಿಗೋ ವಿಶೇಷ ಬಿಕ್ಕಟ್ಟು ನಿರ್ವಹಣಾ ತಂಡ ರಚಿಸಿದೆ.

ಕಂಪನಿಯ ಪ್ರಕಾರ, 100% ಸಾಮಾನ್ಯ ಕಾರ್ಯಾಚರಣೆ ಪುನಃಸ್ಥಾಪನೆ, ಸರಿಯಾದ ಮಾಹಿತಿ ಹಂಚಿಕೆ, ಮರುಪಾವತಿ ವೇಗವರ್ಧನೆ ಮತ್ತು ಪೀಡಿತ ಪ್ರಯಾಣಿಕರ ಮರುಹೊಂದಾಣಿಕೆ CMG ಯ ಪ್ರಮುಖ ಆದ್ಯತೆಗಳಾಗಿವೆ ಎಂದು ಸಂಸ್ಥೆ ತಿಳಿಸಿದೆ.

ಇಂಡಿಗೋ ಬಿಕ್ಕಟ್ಟು ತನ್ನ ಸಿಬ್ಬಂದಿ ರೋಸ್ಟರಿಂಗ್ ಮತ್ತು ಆಂತರಿಕ ಯೋಜನಾ ವ್ಯವಸ್ಥೆಯ ದೋಷಗಳಿಂದ ಉಂಟಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ರಾಜ್ಯ ಸಭೆಯಲ್ಲಿ ಸ್ಪಷ್ಟಪಡಿಸಿದರು.

“ಪ್ರಯಾಣಿಕರಿಗೆ ಅನಾನುಕೂಲ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಇತರೆ ಸಂಸ್ಥೆಗಳಿಗೆ ಮಾದರಿಯಾಗುವ ಕ್ರಮ ಕೈಗೊಳ್ಳಲಾಗುವುದು,” ಎಂದು ಸಚಿವರು ಹೇಳಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಇಂಡಿಗೋ ಈಗಾಗಲೇ 4,500 ಬ್ಯಾಗ್‌ಗಳನ್ನು ಪ್ರಯಾಣಿಕರಿಗೆ ಹಿಂತಿರುಗಿಸಿದ್ದು, ಮುಂದಿನ 36 ಗಂಟೆಗಳಲ್ಲಿ ಉಳಿದ ಬ್ಯಾಗ್‌ಗಳ ವಿತರಣೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಡಿಸೆಂಬರ್ 1–7ರ ನಡುವೆ 5.86 ಲಕ್ಷ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದ್ದು, 569.65 ಕೋಟಿಯಷ್ಟು ಮರುಪಾವತಿ ಮಾಡಲಾಗಿದೆ. ನವೆಂಬರ್ 21ರಿಂದ ಡಿಸೆಂಬರ್ 7ರವರೆಗೆ ಒಟ್ಟು 9.55 ಲಕ್ಷ ಟಿಕೆಟ್‌ಗಳಿಗೆ 827 ಕೋಟಿ ರೂ. ಮರುಪಾವತಿ ನಡೆದಿದೆ.

ಇಂಡಿಗೋ ಇಂದು 137 ತಾಣಗಳಲ್ಲಿ 1,802 ವಿಮಾನಗಳನ್ನು ನಿರ್ವಹಿಸಲು ಯೋಜನೆ ರೂಪಿಸಿದ್ದು, ಇನ್ನೂ 500 ವಿಮಾನಗಳು ರದ್ದಾಗಿವೆ. ದೆಹಲಿ ವಿಮಾನ ನಿಲ್ದಾಣವು ವಿಳಂಬ ಇನ್ನೂ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿರುವುದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಸಲಹೆ ನೀಡಿದೆ.

ಇದೇ ವೇಳೆ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಮತ್ತು ಡಿಸೆಂಬರ್ 10ರೊಳಗೆ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಮರಳುವ ವಿಶ್ವಾಸವಿದೆ ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande