
ನವದೆಹಲಿ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ನೌಕಾ ಅಕಾಡೆಮಿ ಆಯೋಜಿಸಿರುವ 14ನೇ ‘ಅಡ್ಮಿರಲ್ಸ್ ಕಪ್’ ನೌಕಾಯಾನ ಚಾಂಪಿಯನ್‌ಶಿಪ್ ಸೋಮವಾರ ಆರಂಭವಾಗಿದ್ದು, 35 ದೇಶಗಳ ನೌಕಾಪಡೆಯ ತಂಡಗಳು ಭಾಗವಹಿಸುತ್ತಿವೆ. ಜಗತ್ತಿನ ಪ್ರತಿಷ್ಠಿತ ನೌಕಾಯಾನ ಸ್ಪರ್ಧೆಗಳಲ್ಲಿ ಒಂದಾದ ಈ ಕಪ್‌ನ ಅಧಿಕೃತ ಉದ್ಘಾಟನೆ ಡಿಸೆಂಬರ್ 9ರಂದು ನಡೆಯಲಿದೆ.
ಕೇರಳ ಕರಾವಳಿಯ ಸವಾಲಿನ ಸಮುದ್ರಗಳು ಮತ್ತು ಬಲವಾದ ಗಾಳಿಗಳ ನಡುವೆ ನಾಲ್ಕು ದಿನಗಳ ತೀವ್ರ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವ ನೌಕಾಯಾನ ಅಧಿಕಾರಿಗಳಿಗೆ ಇದು ಕೌಶಲ್ಯ, ತಂತ್ರಜ್ಞಾನ, ದೈಹಿಕ ಸಾಮರ್ಥ್ಯಗಳ ಪರೀಕ್ಷೆಯಾಗಲಿದೆ.
2010ರಲ್ಲಿ ಆರಂಭವಾದ ಅಡ್ಮಿರಲ್ಸ್ ಕಪ್ ಸ್ನೇಹಪರ ರಾಷ್ಟ್ರಗಳ ನೌಕಾಪಡೆಯ ತರಬೇತಿ ಅಧಿಕಾರಿಗಳಲ್ಲಿ ಸೌಹಾರ್ದತೆ, ಕಡಲ ಸಹಕಾರ ಮತ್ತು ಪರಸ್ಪರ ನಂಬಿಕೆಯನ್ನು ವೃದ್ಧಿಸುವ ಗುರಿ ಹೊಂದಿದೆ. ವರ್ಷಗಳಿಂದ ಈ ಸ್ಪರ್ಧೆ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠೆ ಗಳಿಸಿ, ವಿವಿಧ ದೇಶಗಳ ನೌಕಾ ಅಕಾಡೆಮಿಗಳಿಂದ ಪ್ರತಿಭಾನ್ವಿತ ನಾವಿಕರನ್ನು ಆಕರ್ಷಿಸುತ್ತಿದೆ.
ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ILCA-6 ಹಾಯಿದೋಣಿ ವರ್ಗದಲ್ಲಿ ಪಂದ್ಯ ರೇಸಿಂಗ್ ರೂಪದಲ್ಲಿ ನಡೆಯುವ ಈ ಚಾಂಪಿಯನ್‌ಶಿಪ್ ಏಷ್ಯಾ, ಯುರೋಪ್, ಆಫ್ರಿಕಾ, ಓಷಿಯಾನಿಯಾ ಮತ್ತು ಅಮೆರಿಕಾ ಖಂಡಗಳ ತಂಡಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.
ಐಎನ್‌ಎಯ ಅತ್ಯಾಧುನಿಕ ನೌಕಾಯಾನ ಸಂಕೀರ್ಣ ಮತ್ತು ಎಳಿಮಲದ ಕರಾವಳಿಯ ಸುಸಜ್ಜಿತ ತರಬೇತಿ ಪರಿಸರ ಸ್ಪರ್ಧೆಗೆ ಅನುಕೂಲಕರವಾಗಿದ್ದು, ಭೇಟಿ ನೀಡುವ ತಂಡಗಳು ಸಾಂಸ್ಕೃತಿಕ ವಿನಿಮಯ, ಸಂವಹನ ಹಾಗೂ ಔಟ್‌ರೀಚ್ ಚಟುವಟಿಕೆಗಳ ಮೂಲಕ ಭಾರತೀಯ ನೌಕಾಪಡೆಯ ಪರಂಪರೆಯನ್ನು ಪರಿಚಯಿಸಿಕೊಳ್ಳಲಿವೆ.
ಡಿಸೆಂಬರ್ 13ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅತ್ಯುತ್ತಮ ತಂಡಗಳು ಮತ್ತು ವೈಯಕ್ತಿಕ ನಾವಿಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಜಾಗತಿಕ ನೌಕಾ ಸಹಕಾರ ಮತ್ತು ಕ್ರೀಡಾ ಮನೋಭಾವ ಬೆಳೆಸುವ ವೇದಿಕೆಯಾಗಿ ಅಡ್ಮಿರಲ್ಸ್ ಕಪ್ ತನ್ನ ಮಹತ್ವವನ್ನು ಮತ್ತಷ್ಟು ಬಲಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa