

ಸಿಂಧನೂರ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಕ್ತಿ-ಶಕ್ತಿ ಪರಂಪರೆಯ ದಿವ್ಯ ಸಂಗಮ ಸಿಂಧನೂರ ತಾಲೂಕಿನ ಸೋಮಲಾಪುರದ ಅಂಬಾಮಠದ ಅಂಬಾ ಮಹೋತ್ಸವ 2026ರ ಕಾರ್ಯಕ್ರಮವು ಜನವರಿ 2ರಿಂದ ಜನವರಿ 6ರವರೆಗೆ ನಿಗದಿಯಾಗಿದ್ದು, ಜನವರಿ 3ರಂದು ನಡೆಯಲಿರುವ ಅಂಬಾ ದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಹಾಗೂ ಇಲಾಖೆಗಳ ಸಚಿವರು, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ್ತು ಇನ್ನೀತರ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಸಿಂಧನೂರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಹೇಳಿದರು.
ಸಿಂಧನೂರ ನಗರದ ಕಾಕತಿಯ ಕ್ಲಬ್ ಆವರಣದಲ್ಲಿ ಡಿಸೆಂಬರ್ 30ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಜನವರಿ 03ರಂದು ಮಧ್ಯಾಹ್ನ 2 ಗಂಟೆಗೆ ಸಿಂಧನೂರು ನಗರಕ್ಕೆ ಆಗಮಿಸುವರು. ಅಂದು ಸಿಂಧನೂರ ನಗರದಲ್ಲಿ ಮಧ್ಯಾಹ್ನ 2 ರಿಂದ 2:30ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಮಧ್ಯಾಹ್ನ ಭೋಜನದ ವಿರಾಮದ ನಂತರ 3:30 ರಿಂದ ಅಂಬಾಮಠಕ್ಕೆ ತೆರಳಿ ಸಂಜೆ 4 ಗಂಟೆಗೆ, ಸಿಂಧನೂರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 400 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಅಂಬಾದೇವಿ ಮಹಾ ರಥೋತ್ಸವ ಮತ್ತು ಜಂಬೂಸವಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಅಂಬಾಮಠವು 400 ವರ್ಷಗಳ ಇತಿಹಾಸ ಹೊಂದಿದ್ದು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರ, ಸೇರಿದಂತೆ ಐದಾರು ರಾಜ್ಯಗಳ ಮತ್ತು ನಮ್ಮ ರಾಜ್ಯದ ಲಕ್ಷಾಂತರ ಭಕ್ತರು ಅಂಬಾಮಠದ ಜಾತ್ರೆಗೆ ಆಗಮಿಸುತ್ತಾರೆ. ಈ ವರ್ಷ ಮಹಾ ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ. ಅಂಬಾ ಮಹೋತ್ಸವ ನಿಮಿತ್ತ ಜನವರಿ 2ರಿಂದ 6ರವರೆಗೆ ಸರಿಗಮಪ ಖ್ಯಾತಿಯ ಗಾಯಕರು ಮತ್ತು ಇತರ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಪ್ರಪ್ರಥಮ ಬಾರಿಗೆ ಜಂಬೂಸವಾರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ಹಾಸ್ಯ ಸಂಜೆ, ಅಹೋ ರಾತ್ರಿ ತತ್ವಪದ ಗಾಯನ, ಕಡುಬಿನ ಕಾಳಗ, ಸಂಗೀತ ಸಂಜೆ, ನಾಟಕ, ದೇವಿ ಪಲ್ಲಕ್ಕಿ ಉತ್ಸವ, ಜಾನಪದ ಜಾತ್ರೆ, ಕುಂಬೋತ್ಸವ, ತತ್ವಪದ ಗಾಯನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲು ಈ ಬಾರಿ ಮಠದ ಆವರಣವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ. ರಸ್ತೆ, ಕುಡಿಯುವ ನೀರು, ಶುಚಿತ್ವ ಸೇರಿದಂತೆ ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಮಠದ ಆವರಣದಲ್ಲಿ 132 ಅಡಿ ಅಗಲದ ರಥಬೀದಿಯನ್ನು ಸುಸಜ್ಜಿತವಾಗಿ ಸಿದ್ಧಪಡಿಸಲಾಗಿದೆ. ಜೊತೆಗೆ ಈ ಬಾರಿ ಮಠದ ಹತ್ತಿರದ 9 ಎಕರೆ ಜಾಗದಲ್ಲಿ ಮಿಟಾಯಿ, ಬಳೆ, ಆಟಿಕೆ ಸಾಮಾನು, ಆಟದ ಯಂತ್ರಗಳ ಹಾಗೂ ಇನ್ನೀತರ ಜಾತ್ರಾ ಅಂಗಡಿಗಳಿಗೆ ಒಂದೆಡೆ ಸಾಲಾಗಿ ಶಿಸ್ತುಬದ್ಧವಾಗಿ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಹಿನ್ನೆಲೆಯಲ್ಲಿ ತಲಾ 6 ಹೆಲ್ಪ್ ಡೆಸ್ಕ್ ಹಾಗೂ ಹೆಲ್ತ್ ಡೆಸ್ಕ್ ಸ್ಥಾಪಿಸಲಾಗಿದೆ. ಸ್ಥಳೀಯ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಹಾಗೂ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡು ತಂಡ ರಚಿಸಿ ಜಾತ್ರೋತ್ಸವದ ನಾನಾ ಸೇವೆಗೆ ನಿಯೋಜನೆ ಮಾಡಿದ್ದೇವೆ ಎಂದು ಶಾಸಕರು ಮಾಹಿತಿ ನೀಡಿದರು.
ರಾಯಚೂರು ಜಿಲ್ಲೆಯ ಇತಿಹಾಸದಲ್ಲಿಯೇ ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಏಕಕಾಲಕ್ಕೆ 24 ಕಂದಾಯ ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿ ಘೋಷಿಸಿ ಆಯಾ ಕಂದಾಯ ಗ್ರಾಮದಲ್ಲಿನ ಫಲಾನುಭವಿಗಳಿಗೆ ಕಂದಾಯ ಸಚಿವರು ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ ಎಂದು ಶಾಸಕರು ತಿಳಿಸಿದರು.
174 ಕೋಟಿ ರು ವೆಚ್ಚದಲ್ಲಿ ಅಂದಾಜು 20,000 ಎಕರೆ ಜಮೀನಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆಗೆ, 69 ಕೋಟಿ ರೂ ವೆಚ್ಚದಲ್ಲಿ ಬ್ರಿಜ್ ಮತ್ತು ಬ್ಯಾರೇಜ್ ನಿರ್ಮಾಣ, 39 ಕೋಟಿ ರು ವೆಚ್ಚದಲ್ಲಿ ಸಿಂಧನೂರಿನ ಹಳ್ಳಕ್ಕೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ, ಗಾಂಧಿನಗರದಿ0ದ ಗೊರೆಬಾಳ ಗ್ರಾಮದವರೆಗೆ ರಸ್ತೆ ಕಾಮಗಾರಿ ಸೇರಿದಂತೆ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ.
ಸಿಂಧನೂರು ತಾಲೂಕಿನಲ್ಲಿ ಅಂದಾಜು 18 ಪದವಿ ಕಾಲೇಜುಗಳು, 32 ಪಿಯುಸಿ ಕಾಲೇಜ್ ಗಳಿದ್ದು ಅಂದಾಜು 25,000 ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಗ್ರಾಮಗಳಿಂದ ಸಿಂಧನೂರು ನಗರಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆಂದೇ 5 ಕೋಟಿ ರೂ ವೆಚ್ಚದಲ್ಲಿ 15 ಬಸ್ಸುಗಳಿಗೆ ಚಾಲನೆ ನೀಡುವ ಕಾರ್ಯಕ್ರಮವು ಸಹ ಇದೇ ವೇಳೆ ನಡೆಯಲಿದೆ ಎಂದು ಶಾಸಕರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ್, ರಾಮಲಿಂಗಾರೆಡ್ಡಿ ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ, ಎನ್.ಎಸ್.ಬೋಸರಾಜು ಸೇರಿದಂತೆ ಇನ್ನಿತರ ಸಚಿವರು ಭಾಗಿಯಾಗಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಸಿಂಧನೂರು ತಾಲೂಕಾಡಳಿತ, ತಾಲೂಕ್ ಪಂಚಾಯತ್ ಹಾಗೂ ಧಾರ್ಮಿಕ ದತ್ತಿ ಇಲಾಖೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರರಾದ ಅರುಣ ದೇಸಾಯಿ, ತಾಪಂ ಇಓ ಚಂದ್ರಶೇಖರ, ಮುಖಂಡರಾದ ಆರ್ ಸಿ ಪಾಟೀಲ, ಖಾಜಿ ಮಲಿಕ್ ಹಾಗೂ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್