
ಕೋಲಾರ, ಡಿ.೨೯ (ಹಿ.ಸ) ಆಂಕರ್ :
ಆ್ಯಂಕರ್ : ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್. ಪ್ರಭಾಕರ ಇವರ ಕಾವ್ಯನಾಮ ಕಾಮರೂಪಿ ಆಗಿದ್ದು ಇವರ ಜೀವನದ ಆದರ್ಶಗಳು ಹಾಗೂ ಸಾಹಿತ್ಯ ಲೋಕಕ್ಕೆ ನೀಡಿದಂತ ಕೊಡುಗೆಗಳು ಇಂದಿನ ಪತ್ರಕರ್ತರಿಗೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ಪಾ.ಶ್ರೀ. ಅನಂತರಾಮು ಅಭಿಪ್ರಾಯಪಟ್ಟರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸಾಹಿತಿ ಎಂ.ಎಸ್.ಪ್ರಭಾಕರ(ಕಾಮರೂಪಿ) ಅವರ ೩ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಪತ್ರಿಕೋದ್ಯಮದ ದಿಗ್ಗಜ ಹಾಗೂ ಧೀಮಂತ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಕಾಮರೂಪಿ ಅಪ್ಪಟ ಸ್ವಾಭಿಮಾನಿಯಾಗಿದ್ದು ತಮ್ಮ ಸಂದ್ಯಾಕಾಲದಲ್ಲೂ ಮಾನಸಿಕವಾಗಿ ಸಧೃಡರಾಗಿದ್ದರು. ೯೭ನೇ ವಯಸ್ಸಿನಲ್ಲೂ ಅವರು ತಮ್ಮ ವೃತ್ತಿಯಲ್ಲಿ ಉತ್ಸಹದ ತುಡಿತವಿರುವುದನ್ನು ಕಾಣಬಹುದಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ ಚಂದ್ರಶೇಖರ್ ಮಾತನಾಡಿ, ಕಾಮರೂಪಿ ಪ್ರಭಾಕರ ಸ್ಮರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಹಿರಿಯ ಪತ್ರಕರ್ತ ಲೇಖಕ ಹಾಗೂ ವಿಮರ್ಷಕರಾಗಿದ್ದರು.
ಹಿರಿಯ ಪತ್ರಕರ್ತರ ಆದರ್ಶಗಳು ಇವತ್ತಿನ ಪತ್ರಕರ್ತರಿಗೆ ಸ್ಫೂರ್ತಿ ಆಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನ ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಪತ್ರಕರ್ತರು ಭಾಗವಹಿಸಿದಾಗ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಇವತ್ತಿನ ದಿನಗಳಲ್ಲಿ ಯುವ ಪತ್ರಕರ್ತರಿಗೆ ವೃತ್ತಿಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಕೇವಲ ಹೆಸರಿಗೆ ಮಾತ್ರ ಪತ್ರಕರ್ತರು ಆದರೆ ಸಾಲದು ನಮ್ಮ ಬರವಣಿಗೆಯ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ನಮಗೆ ಗೌರವ ಸಿಗುತ್ತದೆ. ಈ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾಮರೂಪಿ ಎಂ.ಎಸ್.ಪ್ರಭಾಕರ್ ಚಿಂತಕರಾಗಿದ್ದರೂ ಇವರ ಆದರ್ಶಗಳನ್ನು ಪತ್ರಕರ್ತರು ಅಳವಡಿಸಿಕೊಳ್ಳುವ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ಏನಾದರೂ ಸಾಧನೆಗೈಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕಾಮರೂಪಿ ಅವರ ೩ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯುವ ಪೀಳಿಗೆಗಳ ಮಾರ್ಗದರ್ಶನದ ಸ್ಮರಣೆಯ ಹಿನ್ನಲೆಯಲ್ಲಿ ಮಾಡಲಾಗುತ್ತಿದೆ. ಅವರು ತಮ್ಮ ಕೊನೆಯ ಉಸಿರು ಇರುವವರೆಗೆ ಪತ್ರಿಕೋದ್ಯಮ ವೃತ್ತಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವಂತ ಬದ್ದತೆ ಇತ್ತು ಯಾವೂದೇ ವಿಷಯವನ್ನು ಪರಿಪೂರ್ಣವಾಗಿ ಅರಿಯದೆ ಪ್ರಸ್ತಾಪಿಸುತ್ತಿರಲಿಲ್ಲ ಪ್ರತ್ಯಕ್ಷವಾಗಿ ನೋಡಿದರೂ, ಕೇಳಿದರೂ ಸಹ ಪ್ರಮಾಣಿಸಿ ನೋಡುವಂತ ಗುಣವನ್ನು ಅಳವಡಿಸಿಕೊಂಡಿರುವುದು ವಿಶೇಷವಾಗಿತ್ತು ಎಂದ
ಅವರು ತಮ್ಮ ಪರಿಚಯ ಹಾಗೂ ಒಡನಾಟವನ್ನು ಮೆಲುಕು ಹಾಕಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ಕುಮಾರ್ ಮಾತನಾಡಿ, ಪ್ರಭಾಕರ ಅವರು ತಮ್ಮ ಜೀವನದ ಕೊನೆ ಗಳಿಗೆಯವರೆಗೂ ಬರವಣಿಗೆಯನ್ನು ನಿಲ್ಲಿಸಿದವರಲ್ಲ. ತಮ್ಮ ಆದರ್ಶದ ಮೌಲ್ಯಗಳು, ಸಂದೇಶಗಳು ಇಂದಿನ ಯುವ ಪತ್ರಕರ್ತರಿಗೆ ಮತ್ತು ಸಮಾಜಕ್ಕೆ ಮಾರ್ಗದರ್ಶನವಾಗಿದೆ ಎಂದು ಅವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಅವರನ್ನು ಸ್ಮರಿಸುವ ಕೆಲಸ ಮಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಂಘದ ಖಜಾಂಚಿ ಬಿ.ಎಲ್. ರಾಜೇಂದ್ರಸಿಂಹ ಮಾತನಾಡಿ, ಪತ್ರಿಕೋದ್ಯಮದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕಾಮರೂಪಿ ಪ್ರಭಾಕರ ಅವರು ಹಿಂದೂ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿದ್ದರು. ಅಧ್ಯಾಪಕರಾಗಿದ್ದರು. ಅಸ್ಸಾಂ ರಾಜ್ಯದ ಕಾಮರೂಪಿ ಜಿಲ್ಲೆಯಲ್ಲಿ ದೀರ್ಘಕಾಲಿಕ ಸೇವೆಯಿಂದಾಗಿ ಪ್ರಭಾಕರ ಅವರು ಕಾಮರೂಪಿಯೆಂದೇ ಚಿರಪರಿಚಯರಾದರು. ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾಗಿ ತಮ್ಮ ವರದಿಗಳ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಬಹುಭಾಷ ಪಾಂಡಿತ್ಯವನ್ನು ಹೊಂದಿದ್ದ ಕಾಮರೂಪಿ ರಚಿಸಿದ ಕುದುರೆ ಮೊಟ್ಟೆ ಹಾಗೂ ಅಂಜಿಕಿನ್ಯಾತಕಯ್ಯ ಎಂಬ ಕೃತಿಗಳು ಖ್ಯಾತಿ ಹೊಂದಿದ್ದವು, ರಾಜ್ಯ ಮಟ್ಟದ ಪುರಸ್ಕಾರವನ್ನು ಪಡೆದಿದ್ದರು ಎಂದು ನೆನಪಿಸಿದರು.
ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭಧಲ್ಲಿ ನೆಲ್ಸೆನ್ ಮಂಡೇಲಾ ಅವರ ಸಂದರ್ಶನ ಮಾಡಿದ ವರದಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ವಿಶ್ವದ ಗಮನ ಸೆಳೆದು ವಿಶ್ವಸಂಸ್ಥೆಯಲ್ಲೂ ಚರ್ಚೆಗಳಾಗುವ ಮೂಲಕ ಪ್ರಭಾಕರ ಅವರು ಕೋಲಾರ ಜಿಲ್ಲೆಯ ಕೀರ್ತಿಗೆ ಮೆರಗು ನೀಡಿ ಐತಿಹಾಸಿಕ ದಾಖಲೆಯಾದರು ಎಂದರು.
ಅವಿವಾಹಿತರಾಗಿ ತಮ್ಮ ಜೀವನವನ್ನೆ ಸಮಾಜ ಸೇವೆಗೆ ಮುಡುಪಾಗಿಟ್ಟು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಸಾವಿನಲ್ಲೂ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ದಾನವಾಗಿ ನೀಡುವ ಮೂಲಕ ಸಾರ್ಥಕತೆಯನ್ನು ಮೆರೆದರು. ಇವರಲ್ಲಿನ ಒಂದೆರಡು ಗುಣಗಳನ್ನಾದರೂ ನಾವು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮ ನಿರೂಪಿಸಿ ವಂದಿಸಿದ ಪತ್ರಕರ್ತ ಸಿ.ವಿ.ನಾಗರಾಜ್ ಮಾತನಾಡಿ, ಕಾಮರೂಪಿ ಅವರ ಮನೆಗೆ ಹೋದಾಗ ಸತ್ಕಾರದ ನೆನಪು ಹಾಗೂ ಅವರು ಕೇಳಿದ ಪುಸ್ತಕ ನೀಡಿದಾಗ ಪ್ರತಿಯಾಗಿ ನೀಡಿದ ಮತ್ತೊಂದು ಪುಸ್ತಕ ನೀಡಿದ ಸ್ವಾಭಿಮಾನದ ಬಗ್ಗೆ ನೆನಪಿಸಿದರು.
ಸಂಘದ ಉಪಾಧ್ಯಕ್ಷ ಎಸ್ ರವಿಕುಮಾರ್ ವಂದಿಸಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಎಸ್.ಎನ್.ಪ್ರಕಾಶ್, ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಎಸ್. ಶಮ್ಗರ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಈಶ್ವರ್, ಸರ್ವಜ್ಞಮೂರ್ತಿ, ಪತ್ರಕರ್ತರಾದ ಕೆ.ಎಸ್.ಸುದರ್ಶನ್, ಆಸೀಫ್ ಪಾಷ, ಸ್ಕಂದಕುಮಾರ್, ರಾಮು, ಶ್ರೀಹರಿ, ವಿಜಯಕುಮಾರ್, ನಾಗೇಶ್, ಬೆಟ್ಟಣ್ಣ, ಶ್ರೀನಾಥ್, ವಿನೋದ್ ಇದ್ದರು.
ಚಿತ್ರ ; ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸಾಹಿತಿ ಎಂ.ಎಸ್.ಪ್ರಭಾಕರ(ಕಾಮರೂಪಿ) ಅವರ ೩ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್