
ಬೆಂಗಳೂರು, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಮೂಲದ ಕಾಂಗ್ರೆಸ್ ನಾಯಕರ ಹಾಗೂ ಹೈಕಮಾಂಡ್ ಒತ್ತಡಕ್ಕೆ ಪದೇಪದೇ ಮಣಿಯುತ್ತಿರುವುದು ವಿಷಾದನೀಯ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಹೈಕಮಾಂಡ್‌ನ್ನು ತೃಪ್ತಿಪಡಿಸಲು ನಾಡಿನ ಜನತೆಯ ಸ್ವಾಭಿಮಾನವನ್ನು ಬಲಿ ಕೊಡಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ.
ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಈ ಹಿಂದೆಯೂ ಸಿದ್ದರಾಮಯ್ಯ ಅವರು ಹೈಕಮಾಂಡ್ ಓಲೈಕೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದೆ.
ರಾಹುಲ್ ಗಾಂಧಿಯನ್ನು ಮೆಚ್ಚಿಸಲು ವಯಾನಾಡಿನಲ್ಲಿ ಆನೆ ತುಳಿತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡಲಾಗಿತ್ತು. ಅದೇ ರೀತಿ ಪ್ರಿಯಾಂಕಾ ಗಾಂಧಿಯನ್ನು ಸಂತೃಪ್ತಪಡಿಸುವ ಉದ್ದೇಶದಿಂದ ವಯಾನಾಡಿನ ಭೂಕುಸಿತ ಸಂತ್ರಸ್ತರಿಗೆ ₹10 ಕೋಟಿ ಪರಿಹಾರ ಘೋಷಿಸಲಾಗಿತ್ತು ಎಂದು ಬಿಜೆಪಿ ಹೇಳಿದೆ.
ಕೇರಳ ಮೂಲದ ಕಾಂಗ್ರೆಸ್ ನಾಯಕರ ಪ್ರಭಾವದಿಂದಾಗಿ ಹೈಕಮಾಂಡ್ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿ ತನಿಖೆಗೆ ಆದೇಶ ನೀಡಿತು. ಈ ನಿರ್ಧಾರವನ್ನು ಮುಖ್ಯಮಂತ್ರಿ ತರಾತುರಿಯಲ್ಲಿ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇದೀಗ ಕೋಗಿಲು ಆಕ್ರಮ ಬಡಾವಣೆ ತೆರವು ವಿಚಾರದಲ್ಲಿಯೂ ಕೇರಳದ ಹೈಕಮಾಂಡ್ ಒತ್ತಡಕ್ಕೆ ಮಣಿದು, ಅಕ್ರಮವಾಗಿ ವಾಸವಾಗಿದ್ದವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿರುವುದು ರಾಜ್ಯದ ಕಾನೂನು ಮತ್ತು ಆಡಳಿತ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯನವರೇ, ನೀವು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕೇರಳ ಹೈಕಮಾಂಡ್‌ನ ಅಡಿಯಾಳೋ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ. ಆರಂಭದಿಂದಲೂ ಓಲೈಕೆ ರಾಜಕಾರಣ ಮಾಡುತ್ತ ಬಂದಿರುವ ನಿಮ್ಮ ನಡೆ ನಾಡಿನ ಜನತೆಗೆ ಅಪಮಾನಕರವಾಗಿದೆ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ಕಟುವಾಗಿ ಟೀಕಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa