
ದಾವಣಗೆರೆ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶಾಮನೂರು ಶಿವಶಂಕರಪ್ಪ ಅವರು ಹೃದಯ ಶ್ರೀಮಂತಿಕೆ ವ್ಯಕ್ತಿತ್ವ ಹೊಂದಿದ್ದವರು. ಅವರು ಶಿಕ್ಷಣ, ಧಾರ್ಮಿಕ ಕ್ಷೇತ್ರ, ವ್ಯಾಪಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಮಾಡಿದ್ದಾರೆ. ಅವರ ಆದರ್ಶಗಳು ಸದಾ ಜೀವಂತವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಇಷ್ಟು ದೊಡ್ಡ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಅನೇಕ ಪರಮ ಪೂಜ್ಯ ಜಗದ್ಗುರುಗಳ ಸಂಗಮದಲ್ಲಿ ನಮ್ಮ ಎಲ್ಲಾ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶರಣರ ಗುಣವನ್ನು ಮರಣದಲ್ಲಿ ಕಾಣಬೇಕು ಎಂದು ಹಿರಿಯರು ಹೇಳಿದ್ದಾರೆ. ಶರಣರಿಗೆ ಮರಣವೇ ಮಹಾನವಮಿ ಎಂದು ಕೇಳಿದ್ದೇವೆ. ಮನುಷ್ಯನಿಗೆ ಬದುಕು ಶಾಶ್ವತವಲ್ಲ. ಆದರೆ ಬಿಟ್ಟು ಹೋಗುವ ಕೆಲಸಗಳಷ್ಟೇ ಶಾಶ್ವತ” ಎಂದರು.
“ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ ಉಪಯೋಗಿ ಎಂದು ಕರೆಸಿಕೊಳ್ಳುವುದು ಬಹಳ ಮುಖ್ಯ. ನನ್ನ ಹಾಗೂ ಶಾಮನೂರು ಶಿವಶಂಕರಪ್ಪ ಅವರ ನಡುವಣ ಭಾಂದವ್ಯ ಬೇರೆ. ಅವರು ಎಷ್ಟು ದಿನ ಶಾಸಕರಾಗಿದ್ದರೋ ಅಷ್ಟೂ ದಿನ ಅವರೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದೇನೆ. ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇದ್ದಾರೆ ಎಂಬುದಕ್ಕಿಂತ, ಎಷ್ಟು ಜನರ ಬದುಕನ್ನು ಬದಲಿಸಿದ್ದಾರೆ ಎಂಬುದು ಮುಖ್ಯ. ಅದಕ್ಕೆ ಶಾಮನೂರು ಶಿವಶಂಕರಪ್ಪ ಅವರ ಬದುಕೇ ದೊಡ್ಡ ಸಾಕ್ಷಿಗುಡ್ಡೆ. ಅವರು ನಮ್ಮನ್ನು ಅಗಲಿದ್ದರೂ ಅವರ ಆದರ್ಶಗಳು ನಮ್ಮೊಂದಿಗೆ ಜೀವಂತವಾಗಿವೆ” ಎಂದರು.
“ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. 95 ವರ್ಷದವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ ಅವರು ಇಡೀ ಭಾರತದಲ್ಲಿ ದಾಖಲೆ ಬರೆದಿದ್ದಾರೆ. ಕೋವಿಡ್ ಸಮಯದಲ್ಲಿ ಹತ್ತಾರು ಕೋಟಿ ಹಣ ವೆಚ್ಚ ಮಾಡಿ ಈ ಭಾಗದ ಜನರಿಗೆ ಉಚಿತ ಲಸಿಕೆ ಹಾಕಿಸಿದರು. ಅದರ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ನೀಡಿದ್ದರು. ಸಾವಿರಾರು ಜನರ ಆರೋಗ್ಯ ಕಾಪಾಡಿದವರು ಅವರು. ದೇಶದಲ್ಲಿ ಯಾರೂ ಮಾಡದ ತೀರ್ಮಾನ, ಸೇವೆಯನ್ನು ಅವರು ಮಾಡಿದರು. ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಸಹ ದಾನ, ಧರ್ಮದ ಜೊತೆಗೆ ಸರಳತೆಯನ್ನು ಕಲಿಸಿದ್ದು, ಎಲ್ಲರೂ ಇದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದೆ. ಅಧಿಕಾರಕ್ಕಿಂತ ಆದರ್ಶ ಬಹಳ ದೊಡ್ಡದು ಎಂದು ಅವರು ತಮ್ಮ ಜೀವನದ ಮೂಲಕ ಸಾರಿದ್ದಾರೆ” ಎಂದು ಸ್ಮರಿಸಿದರು.
“ಎಲ್ಲಾ ಜಾತಿ ಧರ್ಮದವರನ್ನು ಬಹಳ ಪ್ರೀತಿಯಿಂದ ಕಂಡಿದ್ದಾರೆ. ಅವರಿಗೆ ನುಡಿನಮನ ಸಲ್ಲಿಸಲು ರಾಜ್ಯದ ಎಲ್ಲಾ ಭಾಗಗಳಿಂದ ಎಲ್ಲಾ ಸಮುದಾಯಗಳ ಸ್ವಾಮೀಜಿಗಳು ಬಂದಿದ್ದಾರೆ. ಶಾಮನೂರು ಅವರ ಸಾಧನೆಯಲ್ಲಿ ಅವರ ಕುಟುಂಬದವರು, ಅನುಯಾಯಿಗಳು, ಸಿಬ್ಬಂದಿ ವರ್ಗದ ಕೊಡುಗೆಯೂ ಇದೆ.” ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa