
ಗಂಗಾವತಿ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು 1.5 ಲಕ್ಷಗಳ ದಂಡ ಸಹಿತ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಗಂಗಾವತಿಯ ಎಚ್.ಆರ್.ಎಸ್ ಕಾಲೋನಿಯ ನಿವಾಸಿ ಹುಲ್ಲೇಶ ಕೊಜ್ಜ ಎಂಬ ಆರೋಪಿಯು ಪ್ರಕರಣದ ಅಪ್ರಾಪ್ತ ವಯಸ್ಸಿನ ಬಾಧಿತಳು ಶಾಲೆಗೆ ಹೋಗಿ ಬರುವಾಗ ಬಾಧಿತಳನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದನು.
2022 ರ ಸೆಪ್ಟೆಂಬರ್ 7 ರಂದು ಬೆಳಿಗೆಗ 9 ಗಂಟೆಗೆ ಬಾಧಿತಳು ಶಾಲೆಗೆ ಹೋಗುವ ಸಮಯದಲ್ಲಿ ಹೊಸಳ್ಳಿ ಕ್ರಾಸ್ ಹತ್ತಿರ ತನ್ನ ಮಾವನ ಮೋಟಾರ ಸೈಕಲ್ ತೆಗೆದುಕೊಂಡು ಬಂದು ಶಾಲೆಗೆ ಬಿಡುವುದಾಗಿ ಹೇಳಿ ಮೋಟಾರ್ ಸೈಕಲ್ ಮೇಲೆ ಹತ್ತುವಂತೆ ಹೇಳಿದಾಗ ಬಾಲಕಿ ನಿರಾಕರಿಸಿದ್ದಳು. ಅವಳನ್ನು ಹೆದರಿಸಿ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಶಾಲೆಗೆ ಬಿಡದೇ ಬಲವಂತವಾಗಿ ಮಲ್ಲಾಪುರ ಸೀಮಾದ ವಾನಭದ್ರೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ 2 ದಿನಗಳ ಕಾಲ ಅತ್ಯಾಚಾರ ಎಸಗಿದ್ದನು. ಹಾಗೂ ಈ ವಿಷಯವನ್ನು ಯಾರಿಗಾದರು ಹೇಳಿದಲ್ಲಿ ನಿನ್ನ ಮತ್ತು ನಿನ್ನ ಅಪ್ಪನನ್ನು ಸಾಯಿಸುವುದಾಗಿ ಜೀವ ಹೆದರಿಕೆ ಹಾಕಿದ್ದನು.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸ್ ನೀರಿಕ್ಷಕ ಮಂಜುನಾಥ ಎಸ್. ಅವರು ದೂರು ಸ್ವೀಕರಿಸಿ ಪ್ರಕರಣದ ತನಿಖೆಯನ್ನು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಸ್ಪೇ.ಎಸ್‌ಸಿ[ಪೋಕ್ಸೊ] ಸಂ: 13/2024 ರಲ್ಲಿ ದಾಖಲಾಗಿ ವಿಚಾರಣೆಗೊಂಡಿದ್ದು, ವಿಚಾರಣೆಯನ್ನು ನಡೆಸಿದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಆರೋಪಿಯ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುವಂತೆ ಹಾಗೂ ರೂ. 1,50,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಡಿಸೆಂಬರ್ 19 ರಂದು ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವಿಶ್ವನಾಥ ಹಾಗೂ ಮಂಜುನಾಥ ಇವರು ನ್ಯಾಯಾಲಯದಲ್ಲಿ ಸಾಕ್ಷಿದಾರರನ್ನು ಸಕಾಲಕ್ಕೆ ಹಾಜರುಪಡಿಸಿ ಸಹಕರಿಸಿರುತ್ತಾರೆ ಎಂದು ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್