
ಶಿವಮೊಗ್ಗ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 18 ವರ್ಷ ವಯಸ್ಸು ತುಂಬಿದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕೆಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ತಿಳಿಸಿದರು.
ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಸ್ವೀಟ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಮಟ್ಟದ ಇ.ಎಲ್.ಸಿ. ವತಿಯಿಂದ ಶುಕ್ರವಾರ ನಗರದ ಸ್ವೀಟ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಇಎಲ್‌ಸಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆಗಳು ನ್ಯಾಯ ಸಮ್ಮತ, ನಿಷ್ಪಕ್ಷಪಾತ, ಭ್ರಷ್ಟಾಚಾರ ಮುಕ್ತ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯಬೇಕು. ಹೀಗೆ ಭ್ರಷ್ಟಾಚಾರ ಮುಕ್ತವಾಗಿ ನಡೆಯಬೇಕಾದರೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಆಮಿಷಗಳಿಗೆ ಒಳಗಾಗದೇ, ಸ್ವತಂತ್ರವಾಗಿ ಮತದಾನ ಮಾಡುಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆಚಾರ-ವಿಚಾರ, ಶಿಸ್ತು, ಸಮಯ ಪಾಲನೆ, ವ್ಯಕ್ತಿ ಗೌರವ, ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ದೇಶದ ಸಂವಿಧಾನದ ಬಗ್ಗೆ ಜಾಗೃತಿಯನ್ನು ಹೊಂದುವ ಮೂಲಕ ಉತ್ತಮ ಸಮಾಜ ಹಾಗೂ ದೇಶವನ್ನು ನಿರ್ಮಾಣ ಮಾಡಲು ಸಹಕಾರಿಯಾಗಬೇಕೆಂದರು.
ರಾಜ್ಯ ಮಟ್ಟದ ಇ.ಎಲ್.ಸಿ ತರಬೇತುದಾರರಾದ ಪರವೇಜ್ ನವೀದ್ ಅಹ್ಮದ್ ಮಾತಾನಾಡಿ, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಯಾವುದೇ ಮತ, ಜಾತಿ, ಧರ್ಮದ ಬೇದ ಭಾವವಿಲ್ಲದೇ ದೇಶದ ಎಲ್ಲಾ ನಾಗರೀಕರಿಗೂ ಮತದಾನವೆಂಬ ಪವಿತ್ರವಾದ ಹಕ್ಕನ್ನು ನೀಡಲಾಗಿದೆ. 18 ವರ್ಷ ತುಂಬಿದ ಪ್ರತಿಯೂಬ್ಬ ಭಾರತದ ನಾಗರೀಕನೂ ಕೂಡಾ ಭಾರತದ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ.
ವೋಟರ್ ಹೆಲ್ಪ್ ಲೈನ್ ಆ್ಯಪ್(ವಿಹೆಚ್‌ಪಿ) ನಲ್ಲಿ ಸ್ವಯಂ, ಅಥವಾ ಹತ್ತಿರದ ಬಿ.ಎಲ್.ಓ ಗಳನ್ನು ಸಂಪರ್ಕಿಸಿ ನಮೂನೆ-6 ನ್ನು ಭರ್ತಿ ಮಾಡುವ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದು. ನಮೂನೆ-8 ರ ಮೂಲಕ ಹೆಸರು, ವಿಳಾಸ, ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದ್ದು ನಮೂನೆ-7 ರಲ್ಲಿ ಮೃತ ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವಕಾಶವಿದೆ. ನಮೂನೆ-12 ರಲ್ಲಿ 80 ವರ್ಷ ವಯಸ್ಸು ತುಂಬಿದ ಹಾಗೂ ವಿಕಲಚೇತನ ಮತದಾರರಿಗೆ ಚುನಾವಣಾ ಅಧಿಕಾರಿಗಳು ಅವರ ಮನೆಗೆ ಬಂದು ರಹಸ್ಯ ಮತದಾನದ ಮೂಲಕ ಮತ ಚಲಾವಣೆಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಎಲ್ಲದರ ಹಿಂದೆ ಇರುವ ಉದ್ದೇಶ ನ್ಯಾಯ ಸಮ್ಮತ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸುವುದಾಗಿದೆ ಎಂದರು.
ತೀರ್ಪುಗಾರರಾಗಿ ಪಾಲ್ಗೊಂಡಿದ್ದ ವಸಂತ್ ನಾಯ್ಕ್ ಮಾತನಾಡಿಮ ಎಲ್ಲಾ ನೀತಿಗಳಲ್ಲಿ ಶ್ರೇಷ್ಠ ನೀತಿ ರಾಜನೀತಿ. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ಮತದಾನ. ಮತದಾನವು ನಿಷ್ಪಕ್ಷಪಾತವಾಗಿ, ನಿಖರವಾಗಿ, ನ್ಯಾಯಸಮ್ಮತವಾಗಿ ನಡೆಯಬೇಕು ಎಂದರು.
ಪ್ರಬಂಧ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಸ.ಪ.ಪೂ.ಕಾಲೇಜು ಬರೂರು ವಿದ್ಯಾರ್ಥಿನಿ ಕೌಶಲ್ಯಗೆ ಪ್ರಥಮ ಬಹುಮಾನ, ಸ.ಪ.ಪೂ.ಕಾಲೇಜು ಆನವಟ್ಟಿ ವಿದ್ಯಾರ್ಥಿನಿ ಸುಮ ಗಣಪ ಕಳಲಿ ದ್ವಿತೀಯ ಹಾಗೂ ತೃತೀಯಾ ಬುಹುಮಾನ ಸ.ಪ.ಪೂ.ಕಾಲೇಜು ತುಮರಿ ವಿದ್ಯಾರ್ಥಿನಿ ಛಾಯಾ ಅವರು ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಇ.ಎಲ್.ಸಿ. ಸಂಚಾಲಕರಾದ ಮಂಜುನಾಥ್ ಬಣಕಾರ, ಸ್ವೀಟ್ ಪಿ.ಯು.ಕಾಲೇಜಿನ ಅಧ್ಯಕ್ಷರಾದ ಗಂಗಾಧರ್ ನಾಯ್ಕ್, ಪ್ರಾಂಶುಪಾಲರಾದ ರೇಖಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa