

ಕೊಪ್ಪಳ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಬಗ್ಗೆ ಕಾಳಜಿ ವಹಿಸುವವರು ಕೊಪ್ಪಳದ ಸುತ್ತಮುತ್ತ ಪ್ರಾರಂಭವಾಗಿರುವ ಕಾರ್ಖಾನೆಗಳಿಂದ ಸುತ್ತ ಮುತ್ತಲಿನ ಜನರಿಗೆ ಹಲವಾರು ರೀತಿಯ ರೋಗಗಳು ಬಾಧಿಸುತ್ತಿದ್ದು, ಆದಷ್ಟು ಬೇಗನೆ ಕಾರ್ಖಾನೆಗಳಿಗೆ ಎಚ್ಚರಿಕೆ ಕೊಟ್ಟು ನಿಯಂತ್ರಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪರಿಸ್ಥಿತಿ ತುಂಬಾ ಕೆಟ್ಟದಾಗುವುದು ಶತಸಿದ್ಧ ಎಂದು ಕೊಪಣ ಸೌಹಾರ್ದ ಸಹಕಾರಿ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ್ ಅಭಿಪ್ರಾಯ ಪಟ್ಟರು.
ಅವರು ನಗರಸಭೆ ಸಂಕೀರ್ಣ ಮುಂದೆ ನಡೆದಿರುವ ಬಲ್ಡೋಟಾ, ಕಲ್ಯಾಣಿ, ಕಿರ್ಲೋಸ್ಕರ್, ಮುಕುಂದ ಸುಮಿ ಮತ್ತು ಎಕ್ಸಿಂಡಿಯಾದಂತಹ ಕಾರ್ಖಾನೆ ವಿಸ್ತರಣೆ, ಸ್ಥಾಪನೆ ವಿರೋಧಿ ಅನಿರ್ದಿಷ್ಟವಾದಿ ಧರಣಿಯ ಭಾಗವಹಿಸಿ ಮಾತನಾಡಿದರು.
ಎಲ್ಲರೂ ಈ ವಿಷಯವನ್ನು ಮನಗಂಡು ಪ್ರಾರಂಭವಾಗುವ ಕಾರ್ಖಾನೆಗಳ ಬಂದ್ ಮಾಡಿಸುವ ಮುಖಾಂತರ ಕೊಪ್ಪಳ ನಗರವನ್ನು ಕಾಪಾಡಬೇಕಿದೆ. ಗವಿಶ್ರೀ ನಗರ ಹೆಸರಿಗಷ್ಟೇ ಪ್ರತಿಷ್ಠಿತ ಜನರು ಇರುವ ವಾರ್ಡ ಆಗಿದೆ. ಆದರೆ ಅಲ್ಲಿ ಧೂಳು ಆವರಿಸಿ ಗೋಳಾಡುವಂತೆ ಮಾಡಿದೆ. ನಮ್ಮ ಸಹಕಾರಿ ನಿಯಮಿತ ಯಾವಾಗಲೂ ಈ ಹೋರಾಟಕ್ಕೆ ಬೆನ್ನೆಲುಬಾಗಿ ಇರುತ್ತದೆ ಎಂದು ಹೇಳಿದರು.
ಗವಿಶ್ರೀ ಬಡಾವಣೆಯಲ್ಲಿ ಬಿಳಿ ಬಟ್ಟೆ ತೊಳೆದಾಕಿದರೆ ಕಪ್ಪಾಗುತ್ತದೆ. ಕಾಳು ಕಡಿ ಒಣಗಾಕಿದರೆ ಅವು ಸಹಿತ ಕಪ್ಪಾಗುತ್ತವೆ. ಈ ಕೆಟ್ಟ ಪರಿಸ್ಥಿತಿ ಇರಬೇಕಾದರೆ ಮಕ್ಕಳು ಮುದುಕರು ಮತ್ತು ರೋಗಿಗಳ ಪರಿಸ್ಥಿತಿ ಏನಾಗಿರಬೇಕು. ಅಲ್ಲಿದ್ದವರಿಗೇ ಗೊತ್ತು ಇದನ್ನು ಅನುಭವಿಸಲು ಆಗುವುದಿಲ್ಲ ಎಂದು ಅಲ್ಲಿನ ನಿವಾಸಿ ಕೀರ್ತಿ ಎಸ್. ಪಾಟೀಲ್ ಹೇಳಿದರು.
ಎಂಎಲ್ಸಿ ಹೇಮಲತಾ ನಾಯಕ ಅವರು ತಮ್ಮ 29ನೇ ವಾರ್ಡಿನಿಂದ ಮಹಿಳಾ ಸಂಘಗಳನ್ನು ಪ್ರತಿನಿಧಿಸಿ ಬಂದು ಬೆಂಬಲಿಸಿದರು. ಧರಣಿಯಲ್ಲಿ ಜಂಟಿ ಕ್ರಿಯ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ (ಕೆ.ಬಿ.ಗೋನಾಳ), ಮಂಜುನಾಥ ಜಿ. ಗೊಂಡಬಾಳ, ಶಾಂತಾ ನಾಯಕ್, ಸಲ್ಮಾ, ಮಂಜುಳಾ, ಮಮತಾ, ಕಲ್ಲಮ್ಮ, ಪ್ರತಿಭಾ ಎಂ.ಜಿ, ಶಾಂತಯ್ಯ ಅಂಗಡಿ, ಬಿ.ಎ.ಆಡೂರ್, ಎಂ.ಎಸ್.ಪಾಟೀಲ್, ಪಂಪಾಪತಿ ಹುಬ್ಬಳಿ, ಶ್ರೀಧರ್ ಸಿ.ಎಲ್, ನಾಗರಾಜ ಹಾಳಕೇರಿ, ಮರಿಯಪ್ಪ ಬೆಲ್ಲದ, ಕಾಶಪ್ಪ ಚಲವಾದಿ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಮಖಬೂಲ್ ರಾಯಚೂರು, ಮೂಕಪ್ಪ ಮೇಸ್ತ್ರಿ ಬಸಾಪುರ ಇತರರು ಇದ್ದರು.
ಗಾಂಧಿ ಬಳಗದಿಂದ ಬೆಳಗ್ಗೆ 10 ಗಂಟೆಗೆ ಗಾಂಧಿ ಪ್ರತಿಮೆ ಮುಂದೆ ಪುಷ್ಪಾರ್ಚನೆ ಮಾಡಿ ಅಲ್ಲಿಂದ ಪಾದಯಾತ್ರೆ ಮೂಲಕ ಮೌನ ಆಚರಿಸುತ್ತಾ ಬಂದು ವೇದಿಕೆಯಲ್ಲಿ ಗಾಂಧಿ ಪುತ್ತಳಿ ಸ್ಥಾಪಿಸಿ ಮೌನ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಾರೆ. ಧರಣಿ ಬಿಡಾರದಲ್ಲಿ ಗಾಂಧಿ ಭಜನೆಯ ಧ್ವನಿ ಸುರುಳಿ ಪ್ರಸಾರವಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್