

ಯಲಬುರ್ಗಾ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಜನಸಾಮಾನ್ಯರನ್ನು ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವುದೇ ಕಾರ್ತಿಕ ಮಾಸ ಆಚರಣೆಯ ಉದ್ದೇಶ ಎಂದು ಕುದರಿಮೋತಿ ಮೈಸೂರುಮಠದ ಶ್ರೀ ಮ.ನಿ.ಪ್ರ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಕಾತರಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಾರ್ತಿಕೋತ್ಸವದ ಉದ್ದೇಶದ ಕೇವಲ ದೀಪ ಹಚ್ಚುವುದು ಅಲ್ಲ, ನಮ್ಮ ಮನದಲ್ಲಿನ ಅಂಧಕಾರ ದೂರ ಮಾಡುವುದಾಗಿದೆ. ಈ ದಿಸೆಯಲ್ಲಿ ೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ಹಚ್ಚಿದ ಜ್ಞಾನದ ದೀಪ ನಮಗೆ ಮುಖ್ಯವಾಗಿದೆ. ಬಸವಣ್ಣನವರು ಭಕ್ತಿಯೇ ಮುಖ್ಯ ಎಂದರು, ಕಾಯಕವೇ ಕೈಲಾಸ ಎಂದು ಸಾರಿದರು. ಆದರೆ ಇಂದಿನ ಅನೇಕ ಅನುಯಾಯಿಗಳು ಕೈಲಾಸವನ್ನು ಅರಸುತ್ತ ಎಲ್ಲೆಲ್ಲೋ ಅಲೆಯುತ್ತಿದ್ದಾರೆ ಎಂದು ವಿಷಾದಿಸಿದರು.
ಮುಂದುವರಿದು ಮಾತನಾಡಿದ ಅವರು, ಇಂದು ಜಾತಿಯ ವಿಷ ಎಲ್ಲೆಡೆ ಹರಡಿದೆ, ಧರ್ಮದ ಅರ್ಥ ಕಲುಷಿತಗೊಂಡಿದೆ. ಮುಂದಿನ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಹೊಣೆ ತಾಯಂದಿರ ಮೇಲಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ಸುಮಿತ್ರಾ ಮಲ್ಲನಗೌಡ ಪೊಲೀಸಪಾಟೀಲ, ಸಂಗಪ್ಪ ಸಂಗಳದ, ಅರ್ಚಕರಾದ ಬಸಯ್ಯ ಹಿರೇಮಠ, ಉಮೇಶ ಶಾಸ್ತ್ರಿಗಳು ಮಠದ, ಸಿದ್ದಲಿಂಗೇಶ ಮಠದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಗಮೇಶ ಮೆಣಸಿನಕಾಯಿ ನಿರೂಪಿಸಿದರು.
ಇದಕ್ಕೂ ಮುನ್ನ ಮಹಿಳೆಯರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಮೆರವಣಿಗೆ ನಡೆಯಿತು. ಸಂಜೆ ಬಸವೇಶ್ವರ ಲಘುರಥೋತ್ಸವ ಜಾನಪದ ವಾದ್ತಮೇಲಗಳೊಂದಿಗೆ ನಡೆಯಿತು. ರಾತ್ರಿ ಯುವಕರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್