

ಬಳ್ಳಾರಿ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಸಣೆ ಪ್ರತಿ ತಿಂಗಳು 9ನೇ ಮತ್ತು 24ನೇ ನಡೆಯುತ್ತಿದ್ದು, ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಹಿನ್ನಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಗನಕಲ್ಲು, ಸಮುದಾಯ ಆರೋಗ್ಯ ಕೇಂದ್ರ ಮೋಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಯರ್ರಗುಡಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ 12 ವಾರದ ಒಳಗೆ ಗರ್ಭಿಣಿ ಎಂದು ತಿಳಿದ ದಿನವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸುವ ಮೂಲಕ ತಾಯಿ ಕಾರ್ಡ್‍ನಲ್ಲಿ ತಮ್ಮ ಎಲ್ಲಾ ಮಾಹಿತಿ ಒದಗಿಸಬೇಕು. ಪ್ರಸ್ತುತ ಪ್ರತಿ ತಿಂಗಳು 24 ನೇಯ ತಾರೀಖಿನಂದು ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಮುಖ್ಯವಾಗಿ ಗಂಡಾಂತರ ಗರ್ಭಿಣಿಯರು (ಚೊಚ್ಚಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್) ಎಂದು ಗುರ್ತಿಸಿದ ನಂತರ ನಿರ್ಲಕ್ಷಿಸುವಂತಿಲ್ಲ ಎಂದು ಮನವರಿಕೆ ಮಾಡಿದರು.
ವೈದ್ಯರು ಎಲ್ಲಾ ಗರ್ಭಿಣಿಯರ ತಾಯಿಕಾರ್ಡ್ ಪರಿಶೀಲಿಸಿ ಗೆಸ್ಟೋಸಿಸ್ ಸ್ಕೋರ್ ಬಗ್ಗೆ ಪರಿಶೀಲಿಸಲು ಹಾಗೂ ತಾಯಿಕಾರ್ಡ್‍ನಲ್ಲಿ ಗರ್ಭಿಣಿಯ ಆರೋಗ್ಯ ತಪಾಸಣೆ ಮಾಹಿತಿಯನ್ನು ತುಂಬಲು ವೈದ್ಯರಿಗೆ ಸೂಚಿಸಿದರು.
ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಹಾಗೂ ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವಿಸಲು ಮತ್ತು ಇದರ ಜೊತೆಯಲ್ಲಿ ದೈಹಿಕವಾಗಿ ಸದೃಢವಾಗಿರಲು ಕ್ಯಾಲ್ಸಿಯಮ್ ಮಾತ್ರೆಗಳನ್ನು ಸಹ ನುಂಗಲು ತಿಳಿಸಿದರು.
ವೈದ್ಯಾಧಿಕಾರಿಗಳಾದ ಡಾ. ರೇವಣಸಿದ್ದಪ್ಪ, ಡಾ. ಭಾರತಿ, ಡಾ. ಶರತ್‍ಚಂದ್ರ, ಡಾ. ಸೈಯದ ಹಫೀಜ ಸೇರಿದಂತೆ ಶುಶ್ರೂಷಣಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗದವರು, ತಾಯಂದಿರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್