
ಬೆಂಗಳೂರು, 05 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಬೆಂಗಳೂರಿನಲ್ಲಿ ಆರ್ಕಾಡಿಸ್ ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ನಗರದಲ್ಲಿ ಮತ್ತಷ್ಟು ಸಹಯೋಗದ ಅವಕಾಶಗಳ ಕುರಿತು ಸಂಸ್ಥೆಯ ಹಿರಿಯ ನಾಯಕಿ ಹೆಲೆನ್ ಮರ್ಫಿ ಹಾಗೂ ಅವರ ತಂಡದೊಂದಿಗೆ ಚರ್ಚಿಸಿರುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಬೆಂಗಳೂರಿನ ಸಂಚಾರ ಪೊಲೀಸರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಸಂಚಾರ ನಿರ್ವಹಣಾ ವೇದಿಕೆಯಾದ ಆಸ್ಟ್ರಾಮ್ ವ್ಯವಸ್ಥೆಯನ್ನು ಅಳವಡಿಸಿ, ಕಾರ್ಯಗತಗೊಳಿಸುವಲ್ಲಿ ಆರ್ಕಾಡಿಸ್ ಸಂಸ್ಥೆ ಸಹಕರಿಸುತ್ತಿದೆ ಎಂದು ಹೇಳಿದ್ದಾರೆ.
ಸಂಚಾರ ಎಂಜಿನಿಯರಿಂಗ್, ನೈಜ ಸಮಯದ ದತ್ತಾಂಶ, ಮುನ್ಸೂಚನಾ ವಿಶ್ಲೇಷಣೆ ಹಾಗೂ ಸಂಚಾರ ಸಿಮ್ಯುಲೇಷನ್ಗಳನ್ನು ಸಂಯೋಜಿಸುವ ಮೂಲಕ ನಗರದಲ್ಲಿ ಸಂಚಾರ ಹರಿವು ಸುಧಾರಣೆ, ಅಪಘಾತ ಹಾಗೂ ಇತರ ಘಟನೆಗಳಿಗೆ ತ್ವರಿತ ಪ್ರತಿಕ್ರಿಯೆ ಮತ್ತು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವ ಉದ್ದೇಶವನ್ನು ಈ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದ್ದಾರೆ.
ನಗರ ಮೂಲಸೌಕರ್ಯ ಮತ್ತು ದೊಡ್ಡ ಸಾರ್ವಜನಿಕ ಯೋಜನೆಗಳ ಉತ್ತಮ ಯೋಜನೆ, ಮೇಲ್ವಿಚಾರಣೆ ಹಾಗೂ ನಿರ್ಧಾರ ಕೈಗೊಳ್ಳುವಿಕೆಗೆ ಆರ್ಕಾಡಿಸ್ ಸಂಸ್ಥೆಯ ಆಸ್ತಿ ನಿರ್ವಹಣೆ ಮತ್ತು ಸಮಗ್ರ ನಿರ್ಧಾರ ವಿಶ್ಲೇಷಣಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.---------------
ಹಿಂದೂಸ್ತಾನ್ ಸಮಾಚಾರ್ / BHARGAVI G R