ರಸಾರಾಧನಂನಲ್ಲಿ ನಿರುಪಮಾ ರಾಜೇಂದ್ರ ಅನನ್ಯ ಹೆಜ್ಜೆಗಳು
ನಿರುಪಮಾ ರಾಜೇಂದ್ರ ಅನನ್ಯ ಹೆಜ್ಜೆಗಳು
nirupama-rajendra-rasaradhanam-solo-bharatanatyam-performance-bengaluru


ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ‘ರಸಾರಾಧನಂ’ ನಗರದ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ ಗಮನ ಸೆಳೆಯಿತು.

ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್ ಅವರ ಕೃತಿಗಳನ್ನು ಆಧರಿಸಿ ರೂಪುಗೊಂಡ ಪ್ರದರ್ಶನದಲ್ಲಿ ಪುರಾಣ, ದೈವಿಕತೆ, ಪ್ರಕೃತಿ ಹಾಗೂ ಶೃಂಗಾರ ರಸವನ್ನು ಅಭಿನಯ ಮತ್ತು ನೃತ್ಯದ ಮೂಲಕ ಅನಾವರಣಗೊಳಿಸಲಾಯಿತು.

ಶಿವನನ್ನು ಓಲೈಸಲು ಪಾರ್ವತಿ ನಡೆಸಿದ ತಪಸ್ಸು, ಅರ್ಧನಾರೀಶ್ವರ ತತ್ವ, ಹರಿ–ಹರರ ಅಭೇದ ಭಾವ, ಕಾಳಿಂಗ ಮರ್ದನ ಸೇರಿದಂತೆ ಹಲವು ಪ್ರಸಂಗಗಳು ನೃತ್ಯರೂಪದಲ್ಲಿ ಮೂಡಿಬಂದವು.

ವಿಶೇಷವಾಗಿ ‘ದೌತ್ಯ ದೀಕ್ಷಿತೆ’ ಕೃತಿಯಲ್ಲಿ ದೂರದಲ್ಲಿರುವ ಪತಿಗೆ ಸಂದೇಶ ಕಳುಹಿಸಲು ತನ್ನ ಮನಸ್ಸನ್ನೇ ದೂತನನ್ನಾಗಿ ಕಳುಹಿಸುವ ನಾಯಕಿಯ ಭಾವನೆಯನ್ನು ನಿರುಪಮಾ ಅವರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು.

ಕಾಳಿಂಗ ಮರ್ದನದ ಸಂದರ್ಭದಲ್ಲಿ ಕೃಷ್ಣನ ಚಲನೆ, ಗಂಗೆ–ಯಮುನೆಯ ಹರಿವು ಹಾಗೂ ಪ್ರಕೃತಿಯ ವಿವಿಧ ರೂಪಗಳನ್ನು ಕ್ಷಣಾರ್ಧದಲ್ಲಿ ಅಭಿನಯದ ಮೂಲಕ ಬದಲಾಯಿಸುತ್ತಾ ನಿರೂಪಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತ, ಬೆಳಕು ಮತ್ತು ನೃತ್ಯದ ಸಮನ್ವಯವು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿತು.

‘ನಿರುಪಮಾ ಅವರ ಶ್ರದ್ಧೆ, ಆಸ್ಥೆ ಅದ್ಭುತ. ಪ್ರದರ್ಶನದ ವೇಳೆಯಲ್ಲೇ ಪ್ರಸ್ತುತಿಯನ್ನು ಸುಧಾರಿಸಿಕೊಳ್ಳುವ ಅವರ ಕೌಶಲ ವಿಶೇಷ.

ಶೃಂಗಾರ ರಸವನ್ನು ಸಮರ್ಪಕವಾಗಿ ಅಭಿವ್ಯಕ್ತಪಡಿಸಿದಾಗ ಭರತನಾಟ್ಯ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ಇಂತಹ ಏಕವ್ಯಕ್ತಿ ನೃತ್ಯ ಪ್ರದರ್ಶನಗಳು ಹೆಚ್ಚು ನಡೆಯಬೇಕು’ ಎಂದು ಶತಾವಧಾನಿ ಡಾ. ಆರ್. ಗಣೇಶ್ ಹೇಳಿದರು.

ಸಂಗೀತ ವಿದುಷಿ ಎಂ.ಎಸ್. ಶೀಲಾ ಅವರು ನಿರುಪಮಾ ಅವರ ಕಲಾಸೇವೆಯನ್ನು ಶ್ಲಾಘಿಸಿ, ‘ನಿರುಪಮಾ ಅವರು ಅಭಿನಯ ಶಾರದೆಯಾಗಿದ್ದಾರೆ. ಅವರ ಕಲಾರಾಧನೆ ನಿರಂತರವಾಗಿ ಮುಂದುವರಿಯಲಿ’ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕಲಾವಿದ ರಾಜೇಂದ್ರ, ಕುಮಾರನ್ ಸಮೂಹ ಸಂಸ್ಥೆಗಳ ದೀಪಾ ಶ್ರೀಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande