
ಶ್ರೀರಂಗಪಟ್ಟಣ, 23 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪ್ರಸಿದ್ಧ ನಿಮಿಷಾಂಭ ದೇವಸ್ಥಾನದಲ್ಲಿ ಭಕ್ತನಿಗೆ ವಿಭೂತಿ ನೀಡದ ವಿಚಾರವಾಗಿ ವಿವಾದ ಉಂಟಾಗಿದ್ದು, ದೇಗುಲದ ಇ.ಒ ಕಚೇರಿ ಎದುರು ಭಕ್ತ ಹಾಗೂ ಮಂಡ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳು ಧರಣಿ ನಡೆಸಿದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ರಾರವಿ ಗ್ರಾಮದ ಯುವ ಭಕ್ತ ದೊಡ್ಡಬಸವನಗೌಡ ಅವರು ಲೋಕಕಲ್ಯಾಣ ಹಾಗೂ ಮಳೆಗಾಗಿ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದಾರೆ.
ಈಗಾಗಲೇ ರಾಜ್ಯದ ಎರಡು ಜ್ಯೋತಿರ್ಲಿಂಗಗಳ ದರ್ಶನ ಪಡೆದಿರುವ ಅವರು ಮಹಾರಾಷ್ಟ್ರದತ್ತ ಪಾದಯಾತ್ರೆ ಮುಂದುವರಿಸಿದ್ದಾರೆ.
ಮಂಗಳವಾರ ಸಂಜೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಅವರು, ಬಳಿಕ ಅರ್ಚಕರ ಬಳಿ ಪ್ರಸಾದವಾಗಿ ವಿಭೂತಿ ಕೇಳಿದ್ದಾರೆ. ಆದರೆ ಅರ್ಚಕರು ವಿಭೂತಿ ನೀಡದೆ ಅವಮಾನಿಸಿ ಹೊರ ಕಳುಹಿಸಿದ್ದಾರೆ ಎಂದು ದೊಡ್ಡಬಸವನಗೌಡ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಮಂಡ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳೊಂದಿಗೆ ದೇವಸ್ಥಾನದ ಇ.ಒ ಕಚೇರಿಗೆ ತೆರಳಿದ ಅವರು ಧರಣಿ ನಡೆಸಿದರು. ಶಿವನ ಸನ್ನಿಧಿಗೆ ಬರುವ ಭಕ್ತರಿಗೆ ಕಡ್ಡಾಯವಾಗಿ ವಿಭೂತಿ ನೀಡಬೇಕು ಎಂದು ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದರು.
ಮಂಡ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳು, “ಶಿವನ ಸನ್ನಿಧಿಗೆ ಬರುವ ಭಕ್ತರಿಗೆ ವಿಭೂತಿ ನೀಡುವುದು ಧಾರ್ಮಿಕ ಸಂಪ್ರದಾಯದ ಭಾಗವಾಗಿದ್ದು, ಭಕ್ತರಿಗೆ ಯಾವುದೇ ರೀತಿಯ ಅಪಮಾನವಾಗದಂತೆ ದೇವಸ್ಥಾನ ಆಡಳಿತ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
ಬಳಿಕ ದೇವಸ್ಥಾನದ ಇ.ಒ ಅವರು ಭಕ್ತನಿಗೆ ನಡೆದ ಘಟನೆಗೆ ಕ್ಷಮೆ ಕೋರಿಸಿ, ವಿಭೂತಿ ನೀಡಿ ಬೀಳ್ಕೊಟ್ಟರು. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ವಿಭೂತಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R