
ಮಂಡ್ಯ, 23 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದರು.
ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಆಯೋಜಿಸಿದ್ದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ ವಿಚಾರ ಸಂಕಿರಣದಲ್ಲಿ ಈ ಆಗ್ರಹ ಕೇಳಿಬಂದಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕುಮಾರ, ‘ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ರೈತರಿಗೆ ನಿರೀಕ್ಷಿತ ಆದಾಯ ದೊರೆಯದಿರುವುದು ಪ್ರಮುಖ ಸಮಸ್ಯೆಯಾಗಿದೆ.
ರೈತರನ್ನು ಕೇವಲ ಅನ್ನದಾತರೆಂದು ಗುರುತಿಸಿ ಅನುಕಂಪ ವ್ಯಕ್ತಪಡಿಸುವುದಕ್ಕೆ ಸೀಮಿತವಾಗದೆ, ಅವರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.
‘ಮಂಡ್ಯ ಜಿಲ್ಲೆ ಕಬ್ಬು ಬೆಳೆಯುವ ಪ್ರಮುಖ ಪ್ರದೇಶವಾಗಿದ್ದು, ಜಿಲ್ಲೆಯ ಆರ್ಥಿಕತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಪಾತ್ರವೂ ಮಹತ್ವದ್ದಾಗಿದೆ. ರೈತರು ಮತ್ತು ಕಾರ್ಖಾನೆಗಳ ನಡುವೆ ಉತ್ತಮ ಸಮನ್ವಯ ಅಗತ್ಯ. ಕಬ್ಬಿನ ಖರೀದಿ, ಸಾಗಣೆ ಹಾಗೂ ಬೆಲೆ ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು’ ಎಂದು ಅವರು ತಿಳಿಸಿದರು.
‘ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (FRP) ಜತೆಗೆ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದಲೂ ಅಗತ್ಯ ಬೆಂಬಲ ದೊರೆಯಬೇಕು. ಕಬ್ಬು ಬೆಳೆಗಾರರ ಸಂಕಷ್ಟವನ್ನು ಪರಿಗಣಿಸಿ ರಾಜ್ಯ ಸರ್ಕಾರ ಪ್ರತಿ ಮೆಟ್ರಿಕ್ ಟನ್ಗೆ ₹50 ಪ್ರೋತ್ಸಾಹಧನ ನೀಡಲು ಆದೇಶಿಸಿದೆ.
ಆದರೆ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿಯಾಗಿ ₹50 ಪಾವತಿಸುವ ವಿಚಾರ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಬಾಕಿಯಾಗಿದೆ’ ಎಂದರು.
ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಹಿತ ಕಾಪಾಡುವ ರೀತಿಯಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.
ವಿಚಾರ ಸಂಕಿರಣದಲ್ಲಿ ಕಬ್ಬಿನ ದರ, ಖರೀದಿ, ಸಾಗಣೆ, ಪ್ರೋತ್ಸಾಹಧನ ಸೇರಿದಂತೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R