


ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ನೀರು ನಿರ್ವಹಣೆಗೆ ತುರ್ತಾಗಿ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಕರೆಯಲು ಆಗ್ರಹಿಸಿ ತುಂಗಭದ್ರ ರೈತ ಸಂಘವು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮಗೌಡ ಅವರು, ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರ ಮೂಲಕ ಸಕಾರಕ್ಕೆ ಬುಧವಾರ ಮನವಿ ಸಲ್ಲಿಸಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ಹಾಗೂ ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲು ಜಿಲ್ಲೆಯಲ್ಲಿ ಎರೆಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಕಾರಣ ನೀರು ನಿರ್ವಹಣೆ ಮತ್ತು ಉಳಿತಾಯಕ್ಕಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಏರ್ಪಡಿಸಬೇಕಾಗಿದೆ.
ಅಲ್ಲದೇ, ಉಳಿದ ನೀರನ್ನು ರೈತರು ಸಂಪೂರ್ಣವಾಗಿ ಬೆಳೆಯನ್ನು ಪಡೆಯಲು ಅನುಕೂಲ ಆಗುವಂತೆ ನವೆಂಬರ್ 30ರ ವರೆಗೆ ಮತ್ತು ಮೆಣಸಿನಕಾಯಿ ಬೆಳೆಗೆ ಡಿಸೆಂಬರ್ 30ರ ವರೆಗೆ ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
ಆಗಸ್ಟ್ 11 ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಜಲಾಶಯದ ಎಡದಂಡೆ ಹಾಗೂ ಬಲದಂಡೆಯ ಎಲ್ಲಾ ನಾಲೆಗಳಿಗೂ 90 ದಿನಗಳವರೆಗೆ, ಅಂದರೆ ನವೆಂಬರ್ 21ರ ವರೆಗೆ ನೀರು ಬಿಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿತ್ತು. ಎಲ್ಲಾ ನಾಲೆಗಳಿಗೂ ಮತ್ತು ನದಿಗೂ ಸೇರಿ ಪ್ರತಿದಿನಕ್ಕೆ 9,500 ಕ್ಯೂಸೆಕ್ ನೀರು ಹರಿಸಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಆದರೆ, ಸುಮಾರು 15 ದಿನಗಳಿಂದ ದಿನಕ್ಕೆ 12,000 ಕ್ಯೂಸೆಕ್ ಮೇಲ್ಪಟ್ಟು ಜಲಾಶಯದಿಂದ ನೀರು ಬಳಸಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 77 ಟಿಎಂಸಿ ನೀರು ಉಳಿದಿದೆ. ಈ ನೀರಿನಲ್ಲಿ ಕುಡಿಯುವ ನೀರು, ಡೆಡ್ ಸ್ಟೋರೇಜ್ ಮತ್ತು ಎವಾಪರೇಷನ್ ಲಾಸ್ 18 ಟಿಎಂಸಿ ತೆಗೆದರೆ ಉಳಿಯುವುದು ಕೇವಲ 59 ಟಿಎಂಸಿ ನೀರು ಮಾತ್ರ. ರೈತರಿಗೆ ನೀರು ಕೊಡುವ ಹಿನ್ನಲೆಯಲ್ಲಿ ನೀರಿನ ಹೊರ ಹರಿವನ್ನು ಕಡಿಮೆ ಮಾಡಬೇಕಾಗಿದೆ. ಕಾರಣ ಸರ್ಕಾರ ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯನ್ನು ತುರ್ತಾಗಿ ಏರ್ಪಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್