
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನಡೆಯುತ್ತಿರುವ ಜಲಶಕ್ತಿ ಸಚಿವಾಲಯದ ಎರಡು ದಿನಗಳ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಅವರ ಪರಿಕಲ್ಪನೆಯಡಿ ನಡೆಯುತ್ತಿರುವ ಮೊದಲ ಇಲಾಖಾ ಶೃಂಗಸಭೆ ಇದಾಗಿದೆ. ‘ತಂಡ ಭಾರತ’ದ ಮನೋಭಾವ ಬಲಪಡಿಸುವುದು, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯದ ಮೂಲಕ ರಾಷ್ಟ್ರೀಯ ಆದ್ಯತೆಗಳ ಕುರಿತು ಸಾಮೂಹಿಕ ಹೊಣೆಗಾರಿಕೆ ಬೆಳೆಸುವುದು ಶೃಂಗಸಭೆಯ ಉದ್ದೇಶವಾಗಿದೆ.
ಶೃಂಗಸಭೆಯ ಮೊದಲ ದಿನ ಜಲ ಕ್ಷೇತ್ರದ ಪ್ರಮುಖ ಆದ್ಯತೆಗಳು, ವಿವಿಧ ರಾಜ್ಯಗಳ ಉತ್ತಮ ಕಾರ್ಯವಿಧಾನಗಳ ಹಂಚಿಕೆ, ಅನುಷ್ಠಾನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಕಾಲಮಿತಿಯ ಕಾರ್ಯಯೋಜನೆ ರೂಪಿಸುವ ಕುರಿತು ಚರ್ಚೆ ನಡೆಯಿತು.
ಜಲ ಮೂಲಸೌಕರ್ಯ ಯೋಜನೆಗಳ ತ್ವರಿತ ಅನುಷ್ಠಾನ, ‘ಜಲ ಸಂಚಯ ಜನ ಭಾಗೀದಾರಿ–ಕ್ಯಾಚ್ ದಿ ರೇನ್’, ಕುಡಿಯುವ ನೀರಿನ ಮೂಲಗಳ ನಿರಂತರತೆ ಮತ್ತು ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಗಳ ನಿರ್ವಹಣೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.