
ನವದೆಹಲಿ, 01 ಸೆಪ್ಟೆಂಬರ್(ಹಿ.ಸ.):
ಆ್ಯಂಕರ್:
ಜಲ ಭದ್ರತೆ ಕುರಿತು ಜಲಶಕ್ತಿ ಸಚಿವಾಲಯ ಆಯೋಜಿಸಿರುವ ಎರಡು ದಿನಗಳ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಸೆಪ್ಟೆಂಬರ್ 1 ಮತ್ತು 2ರಂದು ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಡಿ ಆಯೋಜಿಸಲಾಗುತ್ತಿರುವ ಇಲಾಖಾ ಶೃಂಗಸಭೆಗಳ ಸರಣಿಯಲ್ಲಿ ಇದು ಮೊದಲನೆಯದಾಗಿದೆ.
‘ತಂಡ ಭಾರತ’ದ ಮನೋಭಾವವನ್ನು ಬಲಪಡಿಸುವುದು, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯದ ಮೂಲಕ ರಾಷ್ಟ್ರೀಯ ಆದ್ಯತೆಗಳ ಕುರಿತು ಸಾಮೂಹಿಕ ಹೊಣೆಗಾರಿಕೆ ಬೆಳೆಸುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜಕೀಯ ನಾಯಕರು ಹಾಗೂ ಹಿರಿಯ ಅಧಿಕಾರಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಜಲ ಕ್ಷೇತ್ರದ ಪ್ರಮುಖ ಆದ್ಯತೆಗಳು, ವಿವಿಧ ರಾಜ್ಯಗಳ ಉತ್ತಮ ಕಾರ್ಯವಿಧಾನಗಳ ಹಂಚಿಕೆ, ಅನುಷ್ಠಾನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಸಮಯಬದ್ಧ ಕಾರ್ಯಯೋಜನೆ ರೂಪಿಸುವ ಕುರಿತು ಚರ್ಚೆ ನಡೆಯಲಿದೆ.
ಜಲ ಮೂಲಸೌಕರ್ಯ ಯೋಜನೆಗಳ ಸಮಯೋಚಿತ ಅನುಷ್ಠಾನ, ‘ಜಲ ಸಂಚಯ ಜನ ಭಾಗೀದಾರಿ–ಕ್ಯಾಚ್ ದಿ ರೇನ್’ ಕಾರ್ಯಕ್ರಮ, ಕುಡಿಯುವ ನೀರಿನ ಮೂಲಗಳ ನಿರಂತರತೆ ಹಾಗೂ ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತು ಪ್ರಮುಖವಾಗಿ ಚರ್ಚಿಸಲಾಗುತ್ತಿದೆ.
ಜಲ ಸಂರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು, ಕುಡಿಯುವ ನೀರಿನ ಮೂಲಗಳ ದೀರ್ಘಕಾಲೀನ ಸುಸ್ಥಿರತೆ ಖಚಿತಪಡಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೇವೆಗಳ ವಿಶ್ವಾಸಾರ್ಹತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ನಿಗದಿಪಡಿಸುವ ಉದ್ದೇಶವನ್ನು ಶೃಂಗಸಭೆ ಹೊಂದಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.