
ನವದೆಹಲಿ, 01 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಕ್ಕರೆ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ದಾಸ್ತಾನು ಮಿತಿಯನ್ನು ಕಡಿತಗೊಳಿಸಿದೆ.
ಸೆಪ್ಟೆಂಬರ್ 15ರಿಂದ ದೇಶಾದ್ಯಂತ ಸಕ್ಕರೆ ವಿತರಕರು ಗರಿಷ್ಠ 2,000 ಕ್ವಿಂಟಲ್ ಸಕ್ಕರೆ ಮಾತ್ರ ದಾಸ್ತಾನು ಮಾಡಬಹುದಾಗಿದೆ. ಈ ಮಿತಿ ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ಸಕ್ಕರೆ ಸ್ವೀಕರಿಸಿದ ದಿನದಿಂದ 30 ದಿನಗಳಿಗಿಂತ ಹೆಚ್ಚು ಕಾಲ ದಾಸ್ತಾನು ಇರಿಸಿಕೊಳ್ಳಲೂ ಅವಕಾಶವಿರುವುದಿಲ್ಲ.
ಕೋಲ್ಕತ್ತಾ ಮತ್ತು ಅದರ ಮಹಾನಗರ ವ್ಯಾಪ್ತಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಇಲ್ಲಿ 4,000 ಕ್ವಿಂಟಲ್ ದಾಸ್ತಾನು ಮಿತಿ ಮುಂದುವರಿಯಲಿದೆ. ಪೂರ್ವ ಹಾಗೂ ಈಶಾನ್ಯ ಭಾಗಗಳಿಗೆ ಸಕ್ಕರೆ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಕಾರಣ ಕೋಲ್ಕತ್ತಾಗೆ ಈ ವಿನಾಯಿತಿ ನೀಡಲಾಗಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಸಕ್ಕರೆ ಕಾರ್ಖಾನೆಗಳು, ವಿತರಕರು ಹಾಗೂ ವ್ಯಾಪಾರಿಗಳ ದಾಸ್ತಾನುಗಳ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಕ್ರಮ ದಾಸ್ತಾನು ಮತ್ತು ಕೃತಕ ಅಭಾವ ತಡೆಯಲು ಪರಿಶೀಲನಾ ಕಾರ್ಯ ಮುಂದುವರಿಯಲಿದೆ.
ಕೇಂದ್ರದ ಕ್ರಮಗಳಿಂದ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಇತ್ತೀಚೆಗೆ ಶೇ.20ರಷ್ಟು ಇಳಿಕೆಯಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಚಿಲ್ಲರೆ ದರದಲ್ಲೂ ಇಳಿಕೆಯ ಪ್ರವೃತ್ತಿ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಕಾರ್ಖಾನೆ ಮಟ್ಟದ ದರದಲ್ಲೂ ಇಳಿಕೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಸಕ್ಕರೆ ದಾಸ್ತಾನು ಘೋಷಣೆ ಹಾಗೂ ನವೀಕರಣಕ್ಕೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್‌ಲೈನ್ ವ್ಯವಸ್ಥೆಯನ್ನೂ ಬಳಸಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸುವ ಅಥವಾ ನಿಗದಿತ ಮಿತಿಗಿಂತ ಹೆಚ್ಚಿನ ದಾಸ್ತಾನು ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.