
ಕೋಲಾರ, 17 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಪಠ್ಯದಷ್ಟೇ ಮಹತ್ವವನ್ನು ಕ್ರೀಡೆಯ ಅಗತ್ಯವು ಇದ್ದು, ಮಕ್ಕಳಲ್ಲಿ ನೈತಿಕತೆ ಬೆಳೆಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರೌಢಶಾಲೆಗಳಲ್ಲಿ ಮೌಲ್ಯ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶಾಲಾಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಕೋಲಾರ ತಾಲ್ಲೂಕು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೋಷಕರ ಮನಸ್ಥಿತಿಯೂ ಮಕ್ಕಳ ಅಂಕ ಗಳಿಕೆಗೆ ಸೀಮಿತವಾಗುತ್ತಿದ್ದು, ಮಕ್ಕಳು ಕ್ರೀಡೆ, ವ್ಯಾಯಾಮ, ಮೌಲ್ಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ರಾಜ್ಯ ಸರ್ಕಾರಿ ಇದನ್ನರಿತು ಪ್ರೌಢಶಿಕ್ಷಣದಲ್ಲಿ ಮೌಲ್ಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಪಠ್ಯವೊಂದನ್ನು ಕಲಿತರೆ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂದ ಅವರು, ಮಕ್ಕಳು ಕ್ರೀಡೆ, ಕಲೆ,ಸಾಹಿತ್ಯ ಮೌಲ್ಯ ಶಿಕ್ಷಣ ಎಲ್ಲವನ್ನು ಕಲಿಯುವ ಮೂಲಕ ಸಮಾಜದಲ್ಲಿ ಬದುಕಲು ಅಗತ್ಯವಾದ ನೈತಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸದಾ ನಾಲ್ಕು ಗೋಡೆಗಳ ನಡುವೆ ಓದಿಗೆ ಸೀಮಿತರಾದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಕಾರಣದಿಂದಲೇ ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ ಎಂದ ಅವರು, ಮಕ್ಕಳು ಕ್ರೀಡೆ, ವ್ಯಾಯಾಮ ಮರೆಯಬಾರದು ಎಂದರು.
ಕ್ರೀಡೆಗಳಿಂದಾಗಿ ಮಕ್ಕಳಲ್ಲಿ ಶಿಸ್ತು ಬೆಳೆಯುತ್ತದೆ ಎಂದ ಅವರು, ಕ್ರೀಡೆಗಳಲ್ಲಿಖುಷಿಯಿಂದ ಪಾಲ್ಗೊಳ್ಳಿ, ಸೋಲು,ಗೆಲುವು ಕುರಿತು ಚಿಂತಿಸದಿರಿ, ಭಾಗವಹಿಸುವಿಕೆಯೇ ಅತಿ ಮುಖ್ಯ ಎಂದು ತಿಳಿಸಿ, ಅಬ್ದುಲ್ ಕಲಾಂ ಅವರ ಸೋತಾಗ ಕುಗ್ಗದಿರಿ, ಗೆದ್ದಾಗ ಗೆಲುವು ನೆತ್ತಿಗೇರದಿರಲಿ ಎಂದು ತಿಳಿಸಿ, ತಾಲ್ಲೂಕಿನ ಮಕ್ಕಳು ಜಿಲ್ಲಾ,ರಾಜ್ಯಮಟ್ಟದಲ್ಲೂ ಪ್ರತಿನಿಧಿಸಿ ಸಾಧನೆ ಮಾಡಿ ಎಂದು ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ ಮಾತನಾಡಿ, ದೈಹಿಕವಾಗಿ ಆರೋಗ್ಯದಿಂದಿದ್ದಾರೆ ಮಾತ್ರವೇ ಮಾನಸಿಕವಾಗಿಯೂ ಸದೃಢರಾಗಿರಲು ಸಾಧ್ಯ ಎಂಬ ಸತ್ಯ ಅರಿತು ಪಠ್ಯದಷ್ಟೇ ಪ್ರಮುಖವಾಗಿರುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ . ಇಂದಿನ ಪೋಷಕರು ಮಕ್ಕಳ ಅಂಕ ಗಳಿಕೆಯ ಕಡೆ ಮಾತ್ರವೇ ಗಮನಹರಿಸುವುದರಿಂದ ಇಂದಿನ ಮಕ್ಕಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಲುಕಾರಣವಾಗಿದೆ, ಕ್ರೀಡೆಗಳು ಓದಲು ಆತ್ಮಸ್ಥೆöÊರ್ಯ ತುಂಬುತ್ತವೆ ಎಂಬುದನ್ನು ಮರೆಯಬಾರದು . ಸೋಲು-ಗೆಲುವು ಸಾಮಾನ್ಯ ಆದರೆ ಭಾಗವಹಿಸುವಿಕೆ ಅತಿ ಮುಖ್ಯ ಎಂದ ಅವರು, ಇಂದು ಸೋತವರು ಮುಂದಿನ ಬಾರಿ ಖಂಡಿತಾ ಗೆಲುವಿನ ದಡ ತಲುಪುತ್ತಾರೆ, ಅಂತಹ ಛಲದಿಂದ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಕ್ರೀಡೆಗಳ ಬಗ್ಗೆ ನಿರ್ಲಕ್ಷö್ಯ ಬೇಡ, ಪಠ್ಯಕ್ಕಿಂತ ಹೆಚ್ಚಿನ ಸಾಧನೆ ಕ್ರೀಡೆಗಳಲ್ಲಿ ಮಾಡಿ ರಾಷ್ಟç ಮೆಚ್ಚುವ ವ್ಯಕ್ತಿಗಳಾಗಿರುವವರು ನಮ್ಮ ಕಣ್ಣ ಮುಂದೆ ಇದ್ದಾರೆ. ಕ್ರೀಡೆಗಳಲ್ಲಿ ತೀರ್ಪುಗಾರರ ಜವಾಬ್ದಾರಿ ಹೆಚ್ಚಿನದಾಗಿದೆ, ನೀವು ನಿಷ್ಪಕ್ಷಪಾತ ತೀರ್ಪು ನೀಡಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಿರಿ ಎಂದು ಮನವಿ ಮಾಡಿ, ಮಕ್ಕಳು ಕ್ರೀಡೆಗಳಲ್ಲಿ ಗೆಲುವು,ಸೋಲಿನ ಕುರಿತು ಚಿಂತಿಸದೇ ಛಲದಿಂದ ಆಟವಾಡಿ ಎಂದು ಕೋರಿದರು.
ಖಾಸಗಿ ಶಾಲೆಗಳ ಸಂಘದ ಉಪಾಧ್ಯಕ್ಷ ಮುನಿಯಪ್ಪ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತೀರ್ಪುಗಾರರ ತೀರ್ಪಿಗೆ ಬದ್ದರಾಗಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಿರಿ ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ ಹಾಗೂ ಅರ್ಬಾಜ್ಪಾಷಾ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಮಕ್ಕಳಿಗೆ ಶುಭ ಕೋರಿ ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತನ್ನಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್,ತಾಲ್ಲೂಕು ಅಧ್ಯಕ್ಷ ಆರ್.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ವೆಂಕಟಾಚಲಪತಿಗೌಡ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್,ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಎನ್.ಶ್ರೀನಿವಾಸಮೂರ್ತಿ,ಎಲ್.ಶ್ರೀನಿವಾಸ್, ರಮೇಶ್,ಸಂತೋಷ್ಕುಮಾರ್,ಮುನಿಸ್ವಾಮಿ,ಇಸಿಒ ನಾಗರಾಜ್,ಶಿಕ್ಷಕ ಶಿವಶಂಕರರೆಡ್ಡಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್