
ಕೋಲಾರ, 17 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಕೋಲಾರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪಂಪು ಮೋಟಾರುಗಳನ್ನು ನಾಪತ್ತೆ ಮಾಡಲಾಗಿದ್ದು, ಗ್ರಾಮಸ್ಥರು ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿರ್ಲಕ್ಷ್ಯ ತೋರುತ್ತಿರುವ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋಲಾರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ನಮ್ಮ ಕೋಲಾರ ರೈತ ಸಂಘದ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ ಅವರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೋಲಾರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಸ್ಥವ್ಯಸ್ಥಗೊಂಡಿದೆ. ವಿಶೇಷವಾಗಿ ಹರಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಸದಸ್ಯರು ಹಾಗೂ ವಾಟರ್ಮೆನ್ಗಳು ಸೇರಿಕೊಂಡು ಪಂಪು ಮೋಟಾರ್ ಮತ್ತು ಪೈಪ್ಗಳನ್ನು ಕಣ್ಮರೆ ಮಾಡಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆಯಾಗದಂತೆ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ವಾಟರ್ಮೆನ್ಗಳನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರಗಳನ್ನು ನೀಡುತ್ತಿದ್ದಾರೆ. ಈ ವಿಷಯ ಸ್ಪಷ್ಟವಾಗಿ ತಿಳಿದಿದ್ದರೂ ಸಹ ಪಿಡಿಒ, ಕಂಪ್ಯೂಟರ್ ಆಪರೇಟರ್ ಹಾಗೂ ನೋಡಲ್ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಚಾಮರಹಳ್ಳಿ ಗ್ರಾಮದ ಶಾಂತಮ್ಮ ಅವರು ಕಳೆದ ೧೫ ವರ್ಷಗಳಿಂದ ವಾಸವಿದ್ದರೂ, ಹರಟಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರಿಗೆ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಸಂಪರ್ಕ ನೀಡಿಲ್ಲ. ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯದಲ್ಲೂ ಕಿಡಿಗೇಡಿಗಳ ಮಾತು ಕೇಳಿ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ವಾಟರ್ಮೆನ್ ಹಾಗೂ ತಪ್ಪಿತಸ್ಥ ಮಾಜಿ ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ತೊಂದರೆಗೊಳಗಾದ ಗ್ರಾಮಗಳಿಗೆ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ಮಾರ್ಜೇನಹಳ್ಳಿ ನಾರಾಯಣಸ್ವಾಮಿ, ರಮೇಶ್, ವೆಂಕಟರಾಮಪ್ಪ ಹಾಗೂ ಕೆಂಬೋಡಿ ಕೃಷ್ಣಪ್ಪ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್