
ಕೋಲಾರ, 17 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯ ತಪಾಸಕರಾದ ಜಿ. ಸುರೇಶ್ ಬಾಬು ಅವರನ್ನು ಸೇವೆಯಿಂದ ಅಮಾನತ್ತು ಪಡಿಸಲಾಗಿದೆ. ಅವರು ಕೋಲಾರ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಅವಧಿಯಲ್ಲಿ, ವಿವಿಧ ಕಚೇರಿಗಳಲ್ಲಿ ಇರಬೇಕಿದ್ದ ಒಟ್ಟು ೪೦೬ ಅಧಿಕೃತ ಹಾಗೂ ನಕಲು ಕಡತಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಖಾಸಗಿ ಅತಿಥಿ ಗೃಹಕ್ಕೆ ತೆಗೆದುಕೊಂಡು ಹೋಗಿ ಅನಧಿಕೃತವಾಗಿ ಭೂ ಮಂಜೂರಾತಿ ಆದೇಶಗಳನ್ನು ಸೃಷ್ಠಿ ಮಾಡಿದ್ದರು. ನಕಲಿ ಭೂ ಮಂಜೂರಾತಿ ಆದೇಶಗಳಿಂದ ಸರ್ಕಾರಿ ಬೆಲೆಬಾಳುವ ಜಮೀನುಗಳ ಪರಬಾರೆಯಾಗಿದ್ದವು. ಸುಮಾರು ೬೫೦ ಕೋಟಿ ರೂಪಾಯಿ ಮೌಲ್ಯದ ಜಮೀನುಗಳನ್ನು ಪೋರ್ಜರಿ ದಾಖಲೆಗಳ ಆಧಾರದ ಮೇಲೆ ಮಾರಾಟ ಮಾಡಲಾಗಿತ್ತು. ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಂಡಿದ್ದರು. ಈ ಕುರಿತು ಆಯುಕ್ತರ ಕಚೇರಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಯ ನಿರ್ದೇಶಕರು ಅಧಿಕೃತವಾಗಿ ಅಮಾನತ್ತು ಆದೇಶವನ್ನು ಹೊರಡಿಸಿದ್ದಾರೆ.
ಕೋಲಾರ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ (ಜಿಲ್ಲಾಧಿಕಾರಿಗಳ ಕಚೇರಿ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಸಹಾಯಕ ಕಮೀಷನರ್ ಕಚೇರಿ ಇತ್ಯಾದಿ) ಇರಬೇಕಿದ್ದ ಒಟ್ಟು ೪೦೬ ಕಡತಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಒಟ್ಟು ೪೦೬ ಕಡತಗಳಲ್ಲಿ ಕೇವಲ ಕೋಲಾರ ತಾಲ್ಲೂಕಿಗೆ ಸಂಬಂಧಿಸಿದಂತೆ ೧೬೭ ಕಡತಗಳು ೪೭ ಮೂಲ ಕಡತಗಳು, ೮೪ ನಕಲು ಕಡತಗಳು ಹಾಗೂ ಇತ್ಯಾದಿ ಸೇರಿವೆ.
ದರಖಾಸ್ತು ಮಂಜೂರಾತಿ ಮತ್ತು ಪೋಡಿ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಪಾಲಿಸದೆ, ಕಡತಗಳ ಮುಂದಿನ ಚಲನೆಯನ್ನು ದಾಖಲಿಸದೆ ಹಾಗೂ ಕಚೇರಿ ಹೊರಗೆ ಖಾಸಗಿ ವ್ಯಕ್ತಿಗಳಿಗೆ ಕಡಗಳನ್ನು ನೀಡಲಾಗಿತ್ತು. ಅಧಿಕೃತ ದಾಖಲೆಗಳ ಸಂರಕ್ಷಣೆಯಲ್ಲಿ ಗಂಭೀರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ-೨೦೨೧ರ ನಿಯಮ-೧೦ (೩) ರಡಿಯಲ್ಲಿ ಜಿ. ಸುರೇಶ್ ಬಾಬು ಅವರನ್ನು ಅಮಾನತ್ತು ಪಡಿಸಿ ಇಲಾಖಾ ವಿಚಾರಣೆಗೆ ಆದೇಶ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್