
ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕನ್ನಡ ನಾಡಿಗೆ ಅಷ್ಟೇ ಅಲ್ಲದೆ ದೇಶದ ಅಭಿವೃದ್ಧಿ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿರುವ ಸರ್ ಎಂ ವಿ ಅವರು ಭಾರತದ ತಂತ್ರಜ್ಞಾನ ತಂತ್ರಜ್ಞಾನದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದು ಆರ್.ವೈ.ಎಂ. ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಡಾ. ಹೆಚ್ ಮಹಾಬಲೇಶ್ವರ ತಿಳಿಸಿದರು.
ಅವರು ಮಂಗಳವಾರದಂದು ಜಿಲ್ಲಾ ಕಸಾಪ ಹಾಗೂ ರಾಷ್ಟ್ರೀಯ ಬಸವದಳ ಸಂಯುಕ್ತ ಆಶ್ರಯದಲ್ಲಿ ಬಸವದಳ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆದ ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವೇಶ್ವರಯ್ಯ ಅವರು ಪ್ರತಿಭಾವಂತ ಇಂಜಿನಿಯರ್ ಅಷ್ಟೇ ಅಲ್ಲದೇ, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ಬ್ಯಾಂಕ್, ಎಚ್ಎಎಲ್ ಕನ್ನಂಬಾಡಿ ಅಣೆಕಟ್ಟೆ, ಭದ್ರಾವತಿ ಉಕ್ಕಿನ ಕಾರ್ಖಾನೆ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಮತ್ತು ಕೈಗಾರಿಕೆಗಳನ್ನು ನಿರ್ಮಿಸಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸುಗಾರರಾಗಿದ್ದು, ಅನೇಕ ಯೋಜನೆಗಳನ್ನು ಸರ್ಕಾರದ ಮೂಲಕ ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಡಾ. ಮಹಾಬಲೇಶ್ವರ ತಿಳಿಸಿದರು.
ಇಂಜಿನೀಯರ್ ಟಿ. ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡುತ್ತಾ ವಿಶ್ವೇಶ್ವರಯ್ಯನವರಂತಹ ಪ್ರತಿಭಾ ಸಂಪನ್ನರ ಜೀವನ ಮತ್ತು ಸಾಧನೆ ದೇಶದ ಎಲ್ಲಾ ವಿಭಾಗದ ತಾಂತ್ರಿಕ ಪರಿಣಿತರಿಗೆ ಆದರ್ಶವಾಗಿದೆ ಎಂದರು.
ಕೆ.ಪಿ.ಟಿ.ಸಿ.ಎಲ್. ಸೂಪರಿಂಟೆಂಡೆಂಟ್ ಇಂಜಿನೀಯರ್ ತಿಪ್ಪೇರುದ್ರ ಗುಂಡೇಗೌಡರ ಮಾತನಾಡಿ ವಿಶ್ವೇಶ್ವರಯ್ಯನವರು ಭಾರತದಲ್ಲಿ ಆಷ್ಟೇ ಅಲ್ಲ ದೇಶ ವಿದೇಶಗಳಲ್ಲೂ ತಂತ್ರಜ್ಞಾನದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಆ ಮೂಲಕ ನಿಜವಾದ ಭಾರತ ರತ್ನವಾಗಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಇಂಜಿನೀಯರ್ ಕೇಣಿ ಬಸಪ್ಪ ಮಾತನಾಡಿದರು.
ಹೊಸಪೇಟೆ ಪ್ರೌಢದೇವರಾಯ ಇಂಜಿನೀಯರಿಂಗ್ ಕಾಲೇಜಿನ ಅಧ್ಯಕ್ಷ ಕಲ್ಗುಡಿ ಮಂಜುನಾಥ, ಪಲ್ಲೇದ ಬಸವರಾಜ ಮತ್ತು ಬಸವಕಲ್ಯಾಣದ ಬಸವರಾಜ ನಾವದಗಿ, ನಿವೃತ್ತ ಪ್ರಾಂಶುಪಾಲ ಪ್ರೋ. ಹೆಚ್. ಮಲ್ಲಿಕಾರ್ಜುನ, ಸಿರುಗುಪ್ಪದ ಸಮಾಜ ಸೇವಕರಾದ ಮರಿರಾಜಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ.ಸಾ.ಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾಂದಪಾಷಾ ಸ್ವಾಗತಿಸಿದರು. ಕೆ.ವಿ. ರವಿಶಂಕರ್ ವಂದನಾರ್ಪಣೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್