ಬೆಂಗಳೂರಿಗರ ಮೇಲೆ ಮತ್ತೊಂದು ಶುಲ್ಕದ ಹೊರೆ; ಸಾಫ್ಟ್ವೇರ್ ಸೆಸ್ ವಿಧಿಸಲು ಜಿಬಿಎ ನಿರ್ಧಾರ
ಸಾಫ್ಟ್ವೇರ್ ಸೆಸ್ಗೆ ಜಿಬಿಎ ನಿರ್ಧಾರ
GBA-Moves-to-Impose-Additional-Software-Charge-on-Bengaluru-Residents


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಆಸ್ತಿ ತೆರಿಗೆ ಪಾವತಿಸುವ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತೊಂದು ಶುಲ್ಕದ ಹೊರೆ ವಿಧಿಸಲು ಮುಂದಾಗಿದೆ.

ಆಸ್ತಿ ತೆರಿಗೆ ವ್ಯವಸ್ಥೆಯಡಿ ‘ಸಾಫ್ಟ್ವೇರ್ ಶುಲ್ಕ’ವನ್ನು ಜಾರಿಗೆ ತರಲು ಜಿಬಿಎ ನಿರ್ಧರಿಸಿದ್ದು, ವಸತಿ ಕಟ್ಟಡಗಳಿಗೆ ವಾರ್ಷಿಕ ₹200 ಹಾಗೂ ವಾಣಿಜ್ಯ ಕಟ್ಟಡಗಳಿಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷ ಆಸ್ತಿಗಳಿದ್ದು, ಆಸ್ತಿ ತೆರಿಗೆಯೊಂದಿಗೆ ಈ ಹೆಚ್ಚುವರಿ ಶುಲ್ಕವನ್ನು ಪ್ರತಿ ವರ್ಷ ಪಾವತಿಸಬೇಕಾಗುತ್ತದೆ.

ಆಸ್ತಿ ತೆರಿಗೆ ಹಾಗೂ ದಾಖಲೆಗಳ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವುದು, ಸಾಫ್ಟ್ವೇರ್ ಮತ್ತು ಡಿಜಿಟಲ್ ವ್ಯವಸ್ಥೆಗಳ ನಿರ್ವಹಣೆ ಹಾಗೂ ಅಭಿವೃದ್ಧಿಗಾಗಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಜಿಬಿಎ ತಿಳಿಸಿದೆ.

ಈ ಕ್ರಮಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್ ಎಸ್. ಹರೀಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆಸ್ತಿ ತೆರಿಗೆಯೊಂದಿಗೆ ಗ್ರಂಥಾಲಯ ಸೆಸ್, ಒಳಚರಂಡಿ ಸೆಸ್, ಕಸದ ಸೆಸ್ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸಲಾಗುತ್ತಿದೆ.

ಇದರ ನಡುವೆ ಸಾಫ್ಟ್ವೇರ್ ಶುಲ್ಕದ ಹೆಸರಿನಲ್ಲಿ ಮತ್ತೊಂದು ಮೊತ್ತ ವಸೂಲಿ ಮಾಡುವುದು ಸಾರ್ವಜನಿಕರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಅವರು ಹೇಳಿದ್ದಾರೆ.

“ಈಗಾಗಲೇ ವಿವಿಧ ಸೆಸ್ಗಳು ಹಾಗೂ ಸೇವಾ ಶುಲ್ಕಗಳನ್ನು ಪಾವತಿಸುತ್ತಿರುವ ಆಸ್ತಿ ಮಾಲೀಕರ ಮೇಲೆ ಮತ್ತೊಂದು ಶುಲ್ಕ ವಿಧಿಸುವುದು ಸರಿಯಲ್ಲ. ಹೊಸ ಸಾಫ್ಟ್ವೇರ್ ಶುಲ್ಕ ವಸೂಲಿ ನಿಲ್ಲಿಸದಿದ್ದರೆ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಗುವುದು” ಎಂದು ಹರೀಶ್ ಎಚ್ಚರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಿಬಿಎ ವಿಶೇಷ ಆಯುಕ್ತ ಮೌನೀಶ್ ಮುದ್ಗಿಲ್, ಆಡಳಿತಾತ್ಮಕ ದೃಷ್ಟಿಯಿಂದ ಸಾಫ್ಟ್ವೇರ್ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದು,ಪಂಚ ಪಾಲಿಕೆಗಳ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande